

ಕಲಬುರಗಿ: ನಗರದಲ್ಲಿ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸ್ವಾಗತಿಸಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದೆ.
ಜನರ ಬಹುಕಾಲದ ಬೇಡಿಕೆ ೩೭೧(ಜೆ) ಸಮರ್ಪಕ ಜಾರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಕ್ಯಾಬಿನೆಟ್ ಮೀಟಿಂಗ್ ಸಮ್ಮತಿ ಸೂಚಿಸಿದ್ದು, ವಾರದೊಳಗೆ ಈ ನಿಟ್ಟಿನಲ್ಲಿ ವೈಫಲ್ಯ ಉಂಟಾಗದAತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ಮಾಡುವುದಾಗಿ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಅಧ್ಯಕ್ಷ ಲಕ್ಷö್ಮಣ ದಸ್ತಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಈ ಭಾಗದ ಸಮಸ್ಯೆಗೆ ಪರಿಹಾರ ಒದಗಿಸಲು ಹಲವು ನಿರ್ಧಾರ ಕೈಗೊಂಡಿದ್ದರೂ ಅನುಷ್ಠಾನ, ಹಣ ಹಂಚಿಕೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸಭೆಯಲ್ಲಿ ನಿರ್ಣಯಿಸಿರುವ ಯೋಜನೆಗಳನ್ನು ಸರ್ಕಾರದ ಅನುದಾನದಿಂದ ಜಾರಿಗೊಳಿಸಬೇಕು. ಯಾವ ಕಾರಣಕ್ಕೂ ಕೆಕೆಆರ್‌ಡಿಬಿ ಅನುದಾನ ಬಳಸಬಾರದು ಎಂದು ತಾಕೀತು ಮಾಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಕೊಪ್ಪಳ ಜಿಲ್ಲೆ ತಳಕಲ್‌ನಲ್ಲಿ ಬಹು ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಕೆಕೆಆರ್‌ಡಿಬಿ ಹಣ ಬಳಸಬಾರದು. ತಮ್ಮ ವಿವೇಚನಾ ಕೋಟಾದಡಿ ೩೫೦ ಕೋಟಿ ರೂ. ಖರ್ಚು ಮಾಡುವ ಅಧಿಕಾರ ಹೊಂದಿರುವ ರಾಜ್ಯಪಾಲರೂ ಈ ಹಣವನ್ನು ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಬಳಸಬೇಕು ಮತ್ತು ಕಕ ಹೊರತುಪಡಿಸಿ ಬೇರೆಡೆ ಹಣ ಮಂಜೂರು ಮಾಡಬಾರದು ಎಂದು ಆಗ್ರಹಿಸಿದರು.
ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಹಂತ ಹಂತವಾಗಿ ಆಂದೋಲನ ನಡೆಸಲಾಗುವುದು. ಸಮಿತಿಯು ತಿಂಗಳೊಳಗೆ ರಾಯಚೂರು ಜಿಲ್ಲೆಯಿಂದ ೩೭೧(ಜೆ) ತಾಲೂಕುವಾರು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲು ನಿರ್ಧರಿಸಿದೆ. ನಂತರ ಜನರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಎಲ್ಲ ಗ್ರಾಮಗಳಿಗೆ ವಿಸ್ತರಿಸಲಿದೆ ಎಂದರು.
ಸಮಿತಿ ಸದಸ್ಯರಾದ ಪ್ರೊ.ಬಸವರಾಜ ಗುಳಶೆಟ್ಟಿ, ಪ್ರೊ.ಆರ್.ಕೆ. ಹುಡಗಿ, ಪತ್ರಕರ್ತರಾದ ಮಾಜಿದ್ ಡಾಗಿ, ಮನೀಶ್ ಜಾಜು, ಶರಣಬಸವ ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಇತರರಿದ್ದರು.