

ಬಾಗಲಕೋಟೆ: ಕಾರ್ಯಕರ್ತರೇ ದೇವರು. ಅವರಿಂದಲೇ ಪಕ್ಷ, ಅವರಿದ್ದರೆ ನಾಯಕರಾಗಿ ಬೆಳೆಯಲು ಸಾಧ್ಯ. ಕಾರ್ಯಕರ್ತರ ಸೇವೆ ಕಡೆಗಣಿಸಬಾರದು ಎಂದು ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ, ಹಂಡರಗಲ್ಲ, ಬೊಮ್ಮಣಗಿ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಕ್ಷೇತ್ರ ಅನ್ನೋದು ಸೇವೆಗಾಗಿ ಇರುವ ಒಂದು ಸ್ಥಾನಮಾನ ಮಾತ್ರ. ಅದು ಕಾರ್ಯಕರ್ತರ ಪರಿಶ್ರಮದಿಂದ, ಜನಮತದಿಂದ ಬರುತ್ತದೆ. ಆ ಸ್ಥಾನಮಾನ ಬಂದ ಬಳಿಕ ಏರಿದ ಏಣೆ ಮರೆಯಬಾರದು. ಮತದಾರರ ಪ್ರಭುಗಳ ಸ್ವಾಭಿಮಾನಕ್ಕೆ ಧಕ್ಕೆ ತರಬಾರದು ಎಂದರು.
ಇನ್ನು ಸೇವೆ ಮಾಡಲು ರಾಜಕೀಯವೇ ಬೇಕೆಂದಿಲ್ಲ. ನಮ್ಮ ಗೆಳೆಯರ ಬಳಗದಿಂದ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ. ಇದಕ್ಕೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಸೇವೆ ಮಾಡಲು ನಾವೆಲ್ಲ ಚುನಾವಣೆ ರಾಜಕೀಯಕ್ಕೆ ಬರಲು ಮುಂದಾಗಿದ್ದೇವೆ. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಯುವ ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಮನೆಗೆ ಯಾರೇ ಬಂದರೂ ಅತಿಥಿ ಸತ್ಕಾರ ಮಾಡುವುದು ನಮ್ಮ ಭಾರತೀಯ ಸಂಸ್ಕೃತಿಯ ಧರ್ಮ. ಆದರೆ ಚುನಾವಣೆ ಮುಗಿದ ಬಳಿಕ ಕೆಲವರು ಮತದಾರರಿಗೆ ನಾವ್ಯಾರೋ, ನೀವ್ಯಾರೋ ಅಂತಾರೆ. ನಮ್ಮ ಸಂಸ್ಕೃತಿ-ಧರ್ಮದ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬದಲಾವಣೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಾಮಧೇನು ಸಂಸ್ಥೆಯ ಮುಖಂಡ ವಿಜಯ ಸುಲಾಖೆ ಮಾತನಾಡಿ, ಬಾಗಲಕೋಟೆಯಲ್ಲಿ ಕಾರ್ಯಕರ್ತರೇ ಬದಲಾವಣೆ ಬಯಸಿದ್ದಾರೆ. ಅದಕ್ಕೆ ಕೈ ಜೋಡಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಕಾರ್ಯಕರ್ತರು ಒಗ್ಗಟ್ಟಾದರೆ, ನಮ್ಮ ಶಕ್ತಿ ಏನೆಂದು ತೋರಿಸಲು ಸಾಧ್ಯವಿದೆ ಎಂದು ಹೇಳಿದರು.
ಮುಖಂಡರಾದ ಮೃತ್ಯುಂಜಯ ಬಳೂಲಮಠ, ಅಶೋಕ ಮುತ್ತಿನಮಠ, ಗುರು ಅನಗವಾಡಿ, ರಾಜು ಗೌಳಿ, ಅರುಣ ಲೋಕಾಪುರ, ಪ್ರಶಾಂತ ಸೋನಕನಾಳ, ನಿಂಗಪ್ಪ ಮೋಕಾಶಿ, ಗ್ರಾಮ ಪಂಚಾಯತ್ ಸದಸ್ಯರಾದ ಮುದುಕಪ್ಪ ಬೋಳಿ, ಜಿ.ಎಂ. ಹೀರೆಮಠ, ರಾಜು ಹೊಸಗೌಡರ, ಜಗದೀಶ ಬೆಣ್ಣೂರ, ಮುತ್ತಪ್ಪ ಕೆಂಭಾವಿ, ಶಿವುನಗೌಡ ಹೊಸಗೌಡರ, ಸುರೇಶ ಅಂಗಡಿ, ನಾಗಯ್ಯ ನಡುವಿನಮಠ, ರಾಚಯ್ಯ ಹೀರೆಮಠ, ಸದಪ್ಪ ಬುರ್ಲಿ, ಲಕ್ಷ÷್ಮಣ ಮಾದರ, ಬಸನಗೌಡ ಕಾಳಗಿ, ಬಾಲಪ್ಪ ಸಂಗಮ ಉಪಸ್ಥಿತರಿದ್ದರು.