ಕಾರ್ಮಿಕರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು

bkt-8-6
Published on

ಬಾಗಲಕೋಟೆ: ಜಿಲ್ಲೆಯಾದ್ಯಂತ ಖಾಸಗಿ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಿರುವ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಕಲ್ಯಾಣಾಧಿಕಾರಿ ರಮೇಶ ಸುಂಬಡ ಸಲಹೆ ನೀಡಿದರು.

ಅವರು ತಾಲೂಕಿನ ವೀರಾಪುರ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಜ್ಞಾನಜ್ಯೋತಿ ವಿಕಾಸ ಅಸೋಸಿಯೇಷನ್ ಮತ್ತು ವೀರಾಪುರ ಗ್ರಾಮ ವಿಕಾಸ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ, ಕಾರ್ಮಿಕರ ನೋಂದಣಿ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

"ಕಟ್ಟಡ ಕಾರ್ಮಿಕರು, ಹೋಟೆಲ್ ಸಿಬ್ಬಂದಿ, ದಿನಗೂಲಿ ನೌಕರರು, ಇಟ್ಟಿಗೆ ಕಾರ್ಖಾನೆ ಕಾರ್ಮಿಕರು ಸೇರಿದಂತೆ ಅನೇಕ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ಲಭ್ಯವಾಗುತ್ತಿವೆ. ಈ ಸೌಲಭ್ಯಗಳ ಫಲಾನುಭವಿಗಳು ಆಗಲು ಕಾರ್ಡ್ ಪಡೆಯುವುದು ಅನಿವಾರ್ಯ. ಈಗಾಗಲೇ ಕಾರ್ಡ್ ಹೊಂದಿರುವವರು ತಮ್ಮ ಇತರ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು" ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮಂತ ಬಸವಪ್ರಭು ಸರನಾಡಗೌಡ ಅವರು, "ಜ್ಞಾನಜ್ಯೋತಿ ವಿಕಾಸ ಸಂಸ್ಥೆ ಜಿಲ್ಲೆಾದ್ಯಂತ ಅರ್ಥಪೂರ್ಣ ಕಾರ್ಯಗಳನ್ನು ನಡೆಸುತ್ತಿದೆ. ಇಂತಹ ಸೇವಾ ಕಾರ್ಯಗಳಲ್ಲಿ ನಮ್ಮನ್ನೂ ಸೇರಿಸಿಕೊಳ್ಳಬೇಕು" ಎಂದು ಮನವಿ ಮಾಡಿದರು.

ನಿವೃತ್ತ ಉಪನಿರ್ದೇಶಕ ಎಂ.ಜಿ. ದಾಸರ ಮಾತನಾಡುತ್ತಾ, “ಕಾರ್ಮಿಕರ ಮಕ್ಕಳಲ್ಲಿ ಪ್ರತಿಭೆ ಇರುವವರು ಹೆಚ್ಚು. ಅವರು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಬೇಕು,” ಎಂದರು.

ಉದ್ಯಮಿ ಸಂತೋಷ ಹೊಕ್ರಾಣಿ ಅವರು, “ಕಾರ್ಮಿಕರು ದಿನಗೂಲಿ ಆದಾಯದಿಂದ ಸಂಸಾರ ನಡೆಸುವುದು ಕಷ್ಟ. ಅವರು ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುನ್ನಡೆಯಬೇಕು.” ಎಂದರು.

ಕಾರ್ಯಕ್ರಮದ ವೇಳೆ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಆರ್.ಜಿ. ಪಾಟೀಲ ಸ್ವಾಗತ ಭಾಷಣ ಮಾಡಿದರೆ. ನಿವೃತ್ತ ಪ್ರಾಂಶುಪಾಲ ಶಿವಶಂಕರ ಚೂರಿ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗುರಣ್ಣ ಗೂಡಿ, ಬೀಳಗಿ ಕಲ್ಮಠದ ಗುರುಪಾದ ಸ್ವಾಮೀಜಿ, ಶಿವಯ್ಯ ಸ್ವಾಮೀಜಿ ಹಾಗೂ ವಿಜಯಪುರದ ರವಿ ಲೋನಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net