

ಮಾಗಡಿ : ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುತ್ತಿರುವುದನ್ನು ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಸ್ಕಾಂ ಇಂಜಿನಿಯರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳು ತಾಳೇಕೆರೆ ಹ್ಯಾಂಡ್ ಪೋಸ್ಟ್ ನಿಂದ ನೂರಾರು ರೈತರು ಬೈಕ್ ರ‌್ಯಾಲಿ ಮೂಲಕ ಮಾಗಡಿ ಬೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಹಸಿರುಸೇನೆ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಆಧಾರ್ ಲಿಂಕ್ ಹೆಸರಿನಲ್ಲಿ ರೈತರ ಪಾಲಿಗೆ ಮರಣ ಶಾಸಕ ಬರೆಯಲು ಹೊರಟಿದೆ ಎಂದು ಸರ್ಕಾರದ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರ ಬಂದರೂ ಕೇವಲ ಕಾರ್ಪೊರೇಟ್ ಪರವಾಗಿ ಕೆಲಸ ಮಾಡುತ್ತದೆಯೇ ಹೊರತು ರೈತರ ಪರವಾಗಿ ನಿಲ್ಲುವುದಿಲ್ಲ, ಇನ್ನಾದರೂ ರೈತ ಸಂಘಟನೆಗಳು ಎಚ್ಚೆತ್ತುಕೊಂಡು ಜಾಗೃತರಾಗಬೇಕಿದೆ. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿ ಆನ್‌ಲೈನ್ ಮೂಲಕವೇ ವ್ಯವಹಾರ ನಡೆಸಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ರೈತರು ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದರು.
ನಗರ, ಗ್ರಾಮೀಣ ಎಂಬ ತಾರತಮ್ಯ ಮಾಡದೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ರೈತರಿಗೆ ಗುಣಮಟ್ಟವಿಲ್ಲದ ವಿದ್ಯುತ್ ಪೂರೈಕೆ ಮಾಡಿದ್ದರಿಂದ ರಾಜ್ಯದ ಸುಮಾರು 30 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್ ಮೋಟರ್‌ಗಳು ಸುಟ್ಟಿವೆ ಎಂದು ಸರ್ಕಾರ ನೀತಿ ವಿರುದ್ಧ ಹರಿಹಾಯ್ದರು.
ಜಿಲ್ಲಾಧ್ಯಕ್ಷ ಎ.ಎಲ್.ಭೈರೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಇರುವ ಟಿಸಿಗಳಿಗೆ ಗಿಡಗೆಂಟೆಗಳು ಹಬ್ಬಿಕೊಂಡಿದ್ದು, ಮೊದಲು ತೆಗೆಸಿ ದುರಸ್ಥಿಪಡಿಸಬೇಕು. ಇದರಿಂದಲೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿ ರೈತ ಪಂಪ್ ಮೋಟಾರ್‌ಗಳು ಸುಡುತ್ತಿವೆ. ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಮತ್ತು ವಿದ್ಯುತ್ ಕಂಪನಿಗಳು ಒಟ್ಟಾಗಿ ಈಡೇರಿಸಬೇಕು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ಮಿತ್ರ ರವಿಕಿರಣ್ ಮಾತನಾಡಿದರು.