ಕಾರ್ಮಿಕರ ಶ್ರಮ ಅಭಿವೃದ್ಧಿಗೆ ಅಡಿಪಾಯ

Oplus_131072
Oplus_131072
Published on

ಚನ್ನರಾಯಪಟ್ಟಣ: ದೇಶದ ಶಕ್ತಿ, ಆಸ್ತಿಯಾಗಿರುವ ಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ದುಶ್ಚಟಗಳಿಂದ ದೂರವಿದ್ದು ಶಿಸ್ತುಬದ್ಧ ಜೀವನ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ನಾಗಯ್ಯನ ಕೊಪ್ಪಲು ಗ್ರಾಮದಲ್ಲಿ ಗುರುವಾರ ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಶ್ರಮದ ಶಕ್ತಿಯನ್ನು ತಿಳಿಸಿಕೊಡುವರು ಕಾರ್ಮಿಕರು. ಅವರಲ್ಲಿನ ಬದ್ಧತೆ, ಶ್ರಮ, ನಿಷ್ಠೆ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು.

ಕಾರ್ಮಿಕರ ಸಂರಕ್ಷಣೆ ಮತ್ತು ಸೂಕ್ತ ವೇತನಕ್ಕೆ ಮುಂದಾಗಿ ಪ್ರತಿಯೊಬ್ಬರೂ ಕಾರ್ಮಿಕರನ್ನು ಗೌರವಿಸುವುದು ಮುಖ್ಯವಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘ ರಚಿಸಿ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ. ಎಲ್ಲ ಕ್ಷೇತ್ರಗಳಲ್ಲೂ ಶ್ರಮಪಟ್ಟು ಕೆಲಸ ಮಾಡುವ ಮೂಲಕ ಕಾರ್ಮಿಕರು ತಮ್ಮ ಛಾಪು ಮೂಡಿಸಿದ್ದಾರೆ. ನೊಂದ ಕಾರ್ಮಿಕರಿಗೆ ಸಹಾಯ ಮಾಡುವ ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಧ್ಯೇಯ ಇತರರಿಗೆ ಮಾದರಿಯಾಗಲಿ ಎಂದರು.

ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಯುವರಾಜ್ ಮಾತನಾಡಿ, ಸಂಘಟನೆಗಳನ್ನು ಆರಂಭಿಸಿ ಕೇವಲ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವುದಷ್ಟೇ ಅಲ್ಲ. ಕೂಲಿ ಕಾರ್ಮಿಕರ ಕುಟುಂಬಗಳಿಗೆ ಕಷ್ಟದ ಸಮಯದಲ್ಲಿ ಸಹಾಯಕ್ಕೆ ನಿಲ್ಲುವುದು ಮುಖ್ಯ ಎಂದರು.

ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ಮಾತನಾಡಿ, ಕಾರ್ಮಿಕರ ಪೈಕಿ ಶೇ.90 ಜನ ದುಶ್ಚಟಗಳಿಗೆ ಬಲಿಯಾಗಿ ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ದೂರವಿದ್ದು ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹಣ ಕೂಡಿಡಬೇಕು. ನಿಮ್ಮ ಭದ್ರತೆಗಾಗಿ ಉಳಿತಾಯ ಯೋಜನೆಗಳನ್ನು ಮಾಡಿಸಿ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ತಾಬ್ ಪಾಷ, ಉಪಾಧ್ಯಕ್ಷೆ ಕಾವ್ಯಶ್ರೀ ಕಿರಣ್, ಸೆಸ್ಕ್ ಶಾಖಾಧಿಕಾರಿ ಚಂದ್ರಶೇಖರ್, ಸದಸ್ಯ ವಾಸಣ್ಣ, ಚಂದ್ರು, ಮಾಜಿ ಅಧ್ಯಕ್ಷ ಲೋಕೇಶ್, ರವಿ, ಮುಖಂಡರಾದ ಜಾವೇದ್, ಗುಂಡ, ಕಿರಣ್, ಧರ್ಮಣ್ಣ, ಶ್ರೀರಾಮ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ರಘುರಾಂ, ಕಾರ್ಯದರ್ಶಿ ಅಭಿಜಿತ್, ಗೌರವ ಅಧ್ಯಕ್ಷ ಅಶೋಕ್, ಖಜಾಂಚಿ ಎನ್.ವಿ.ವೆಂಕಟೇಶ್, ಉಪಕಾರ್ಯದರ್ಶಿ ಹರೀಶ್, ಸದಸ್ಯರಾದ ಮಂಜುನಾಥ್, ನವೀನ್, ಸುಧಾಕರ್, ಕುಮಾರ್, ಅರ್ಜುನ್, ಮಣಿಕಂಠ, ದಿನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net