ಕಾರ್ಮಿಕರ ಲೂಟಿ ಹಣ ಏಳೆಂಟು ಕೋಟಿಗೆ ಏರಿಕೆ !

bkt-23-11
ಕಾರ್ಮಿಕ ಇಲಾಖೆ ಕಚೇರಿ.
Published on

ಅಶೋಕ ಶೆಟ್ಟರ, ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ಲೂಟಿ ಹೊಡೆದಿರುವ ಹಣದ ಮೊತ್ತ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ್ದ ೨.೪೭ ಕೋಟಿ ರೂ.ಗಳನ್ನು ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿರುವ ಪ್ರಕರಣ ಅಂತಿಮವಾಗಿ ಐದು ಇಲಾಖೆಗಳಿಗೆ ಸಂಬಂಧಿಸಿದಂತೆ ೮.೦೬ ಕೋಟಿ ರೂ.ಗೆ ಏರಿಕೆ ಆಗಿ, ಇದೀಗ ಪ್ರಕರಣ ಸಿಐಡಿ ತನಿಖೆಗೆ ವಹಿಸಲಾಗಿದೆ.
ಆದರೆ, ಇದಕ್ಕೂ ಮೊದಲು ಬೆಳಕಿಗೆ ಬಂದಿದ್ದ ಜಿಲ್ಲೆಯ ಕಾರ್ಮಿಕ ಇಲಾಖೆಯ ಹಗರಣದಲ್ಲಿ ಬಡ ಕಾರ್ಮಿಕ ಫಲಾನುಭವಿಗಳಿಗೆ ಸೇರಬೇಕಿದ್ದ ಅನುದಾನವನ್ನು ಇಲಾಖೆ ಹೊರಗುತ್ತಿಗೆದಾರ ಕೊಳ್ಳೆ ಹೊಡೆದಿರುವ ಹಣದ ಮೊತ್ತ ಗಾಳಿಪಟದಂತೆ ಏರಿಕೆ ಆಗುತ್ತಲೇ ಇದೆ.
ಫಲಾನುಭವಿ ಒಬ್ಬರು ನೀಡಿದ ದೂರಿನ ಅನ್ವಯ ದಾಖಲೆ ಪರಿಶೀಲಿಸಿದಾಗ ಬಾಗಲಕೋಟೆ ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಮುಧೋಳ ತಾಲೂಕಿನ ಲೋಕಾಪುರದ ದ್ಯಾವಪ್ಪ ಕೃಷ್ಣಪ್ಪ ತಳವಾರ ಎನ್ನುವ ಆರೋಪಿ ಹಣ ದೋಚುತ್ತಿರುವುದು ಬೆಳಕಿಗೆ ಬಂದಿತ್ತು. ಆರಂಭದಲ್ಲಿ ೩೭.೧೨ ಲಕ್ಷ ರೂ. ಲೂಟಿ ಆಗಿರುವ ಬಗ್ಗೆ ಇಲಾಖೆಯ ಉಪ ಆಯುಕ್ತ ನಾಗೇಶ್ ಡಿ.ಜಿ. ಎನ್ನುವವರು ಫೆ. ೨೯ ರಂದು ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದರು.

ಇಲಾಖೆಯ ಮೇಲಾಧಿಕಾರಿಗಳು ದಾಖಲೆ ಪರಿಶೀಲಿಸಿದಾಗ ವಿವಿಧ ಯೋಜನೆಗಳ ಅಡಿಯಲ್ಲಿ ೪೦೪ ಫಲಾನುಭವಿಗಳಿಗೆ ಸೇರಬೇಕಿದ್ದ ೨.೮೩ ಕೋಟಿ ರೂ.ಗೆ ಏರಿಕೆ ಆಗಿತ್ತು. ಇದೀಗ ಪರಿಶೀಲನೆ ಮುಂದುವರೆದು ಈ ವರೆಗೂ ಒಟ್ಟು ೧೧೪೧ ಫಲಾನುಭವಿಗಳಗೆ ಸಂಬಂಽಸಿದ ಏಳೆಂಟು ಕೋಟಿ ರೂ. ಅಧಿಕ ಹಣಕ್ಕೆ ಕನ್ನ ಹಾಕಿರುವುದು ಕಂಡು ಬರುತ್ತಿದೆ. ಆದರೆ, ಈ ಬಗ್ಗೆ ಅಗತ್ಯ ದಾಖಲೆಗಳ ಜೊತೆ ಅಡಿಟ್ ರಿಪೋರ್ಟ್ ಸಲ್ಲಿಸುವಂತೆ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಆದರೆ, ಇಲಾಖೆಯಲ್ಲಿ ಕೆಲ ವರ್ಷಗಳಿಂದ ಅಡಿಟ್ ಮಾಡಿಸಿಲ್ಲ ಎನ್ನಲಾಗುತ್ತಿದೆ.

ಹಣ ಯಾಮಾರಿಸಿದ್ದೇಗೆ ಗೊತ್ತಾ?
ಕಟ್ಟಡ ಹಾಗೂ ಇತರೆ ನಿರ್ಮಾಣ ನೋಂದಾಯಿತ ಕಾರ್ಮಿಕ ಫಲಾನುಭವಿಗಳಿಗೆ ಇಲಾಖೆಯಿಂದ ಕಾರ್ಮಿಕರ ಮಕ್ಕಳ ಮದುವೆ, ಕಾರ್ಮಿಕರಿಗೆ ವೈದ್ಯಕೀಯ ವೆಚ್ಚದ ಧನಸಹಾಯ ಕೊಡಲಾಗುತ್ತದೆ. ಹೀಗೆ ಅರ್ಜಿ ಹಾಕಿದ ಫಲಾನುಭವಿಗಳ ದಾಖಲೆ ಪರಿಶೀಲಿಸಿ, ಕಾರ್ಮಿಕ ಅಽಕಾರಿಗೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ಬೆಂಗಳೂರನಲ್ಲಿ ಇರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಳುಹಿಸಿ, ಅಲ್ಲಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ದ್ಯಾವಪ್ಪ ತಳವಾರ ಸಹಾಯಧನ ಕೋರಿ ಬಂದಿದ್ದ ಅರ್ಜಿ ಸಂಖ್ಯೆ ಹಾಗೂ ಫಲಾನುಭವಿಗಳ ಹೆಸರು ಸರಿಯಾಗಿ ಬರೆದು ಬಳಿಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫಸಿ ಕೋಡ್ ನ್ನು ಬೇರೆ ಹೆಸರಿನಲ್ಲಿ ಕಳುಹಿಸುತ್ತಿದ್ದ. ಅಲ್ಲಿ ತನ್ನ ವೈಯಕ್ತಿಕ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆ ನೀಡಿ ಅವುಗಳಿಗೆ ಹಣ ವರ್ಗಾವಣೆ ಆಗುವಂತೆ ಮಾಡಿ, ಕಾರ್ಮಿಕರ ಧನಸಹಾಯವನ್ನು ಯಾಮಾರಿಸಿಕೊಂಡು ಬಂದಿದ್ದಾನೆ. ಅದು ಇದೀಗ ಏಳೆಂಟು ಕೋಟಿ ರೂ.ಗೆ ತಲುಪಿದೆ ಎನ್ನಲಾಗುತ್ತಿದೆ.

ನಾಲ್ವರ ವಿರುದ್ಧ ದೂರು ದಾಖಲು :
ಕಾರ್ಮಿಕ ಫಲಾನುಭವಿ ಒಬ್ಬರು ತಮಗೆ ಸಹಾಯ ಧನ ಬಂದಿಲ್ಲ ಎಂದು ಕಾರ್ಮಿಕ ಸಚಿವರ ಕಚೇರಿಗೆ ದೂರು ಕೊಟ್ಟಿದ್ದ. ಸಚಿವರ ಸೂಚನೆ ಮೇರಿಗೆ ಕಾರ್ಮಿಕ ಮಂಡಳಿ ದಾಖಲೆ ಪರಿಶೀಲಿಸಿ, ಪ್ರಾಥಮಿಕ ತನಿಖೆ ನಡೆಸಿದಾಗ ಇಲ್ಲಿ ದ್ಯಾವಪ್ಪ ಹಾಗೂ ಇತರರು ಅಕ್ರಮವೆಸಗಿರುವುದು ಬೆಳಕಿಗೆ ಬಂದಿತ್ತು. ಬೆಳಗಾವಿ ಇಲಾಖೆ ಅಧಿಕಾರಿ ಮೂಲಕ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ನಾಲ್ವರು ಹಾಗೂ ಇತರೆ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಬಂಧಿತನಾಗಿದ್ದ ದ್ಯಾವಪ್ಪ ಜಾಮೀನು ಪಡೆದು ಹೊರಗಡೆ ಇದ್ದಾರೆ. ಆರೋಪಿಯಿಂದ ಪೊಲೀಸರು ಈ ವರೆಗೂ ೧.೫ ಕೋಟಿ ರೂ. ಜಪ್ತಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net