ಕಾರವಾರದಲ್ಲಿ ವರುಣನ ಆರ್ಭಟ

18KWR2
Published on

ಕಾರವಾರ: ತಾಲೂಕಿನಲ್ಲಿ ಶನಿವಾರ ಸುರಿಯುತ್ತಿರುವ ಭಾರಿ ಮಳೆಗೆ ತಗ್ಗು ಪ್ರದೇಶಗಳು, ಹಲವು ರಸ್ತೆಗಳು ಜಲಾವೃತವಾಗಿವೆ. ಶನಿವಾರ ಬೆಳಗ್ಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತರ ಜೋರಾಗಿ ಸುರಿಯಲಾರಂಭಿಸಿದೆ. ಪರಿಣಾಮ ನಗರದ ಹೈಚರ್ಚ್ ರಸ್ತೆ, ಹಬ್ಬುವಾಡ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ, ಜನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕೆಎಚ್​ಬಿಯಲ್ಲಿ ತಗ್ಗಿನ ಪ್ರದೇಶದಲ್ಲಿರುವ ಖಾಲಿ ಸೈಟ್​ಗಳು, ಚರಂಡಿ ಎಲ್ಲವೂ ತುಂಬಿ ರಸ್ತೆಗೂ ನೀರು ಹತ್ತಿದೆ. ಮುದಗಾ, ಅರಗಾದಲ್ಲಿ ಹೆದ್ದಾರಿಯ ಮೇಲೆ ನೀರು ತುಂಬಿಕೊಂಡಿದೆ. ಅಮದಳ್ಳಿಯಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ. ಮಾಜಾಳಿ ಘೊಟ್ನೇಬಾಗದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದೆ.

ಶಾಲೆ ಗೋಡೆ ಕುಸಿತ: ದೇವಳಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಹಳೆಯ ಮಣ್ಣಿನ ಗೋಡೆ ಭಾರಿ ಮಳೆಗೆ ಕುಸಿದು ಬಿದ್ದಿದೆ. 1950 ರಲ್ಲಿ ನಿರ್ವಣವಾದ ಹಳೆಯ ಕಟ್ಟಡ ಇದಾಗಿದ್ದು, ಅದನ್ನು ರಿಪೇರಿ ಮಾಡುವಂತೆ ಎಸ್​ಡಿಎಂಸಿ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು. ಆದರೆ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ಗೋಡೆ ಕುಸಿದಿದೆ. ಇಡೀ ಕಟ್ಟಡ ಮುರಿದು ಬೀಳುವ ಸಾದ್ಯತೆ ಇದೆ. ಶಾಲೆಯ ಅಗತ್ಯ ಆಟದ ಸಾಮಗ್ರಿಗಳು ಪೀಠೋಪಕರಣಗಳು ಎಲ್ಲವೂ ಇದ್ದು ಅವುಗಳನ್ನಾದರೂ ರಕ್ಷಿಸಬೇಕು ಎಂದು ಹಳೆಯ ವಿದ್ಯಾರ್ಥಿ ಪ್ರಜ್ವಲ ಶೇಟ್ ಆಗ್ರಹಿಸಿದ್ದಾರೆ.

ಮಳೆಯ ಪ್ರಮಾಣ: ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 85.9, ಭಟ್ಕಳ- 70.8, ಹಳಿಯಾಳ- 18, ಹೊನ್ನಾವರ- 126.6, ಕಾರವಾರ- 90.4, ಕುಮಟಾ-68.13, ಮುಂಡಗೋಡ- 15, ಶಿರಸಿ- 61.6, ಸಿದ್ದಾಪುರ- 48, ಜೊಯಿಡಾ- 61.8, ಯಲ್ಲಾಪುರದಲ್ಲಿ 48.6 ಮಿಮೀ ಮಳೆಯಾಗಿದೆ. ಸೂಪಾ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ 15197 ಕ್ಯೂಸೆಕ್​ಗೆ ಏರಿಕೆಯಾಗಿದೆ. ಕದ್ರಾ ಅಣೆಕಟ್ಟೆಗೆ 11585 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net