ಕಾರವಾರ-ಗೋವಾ ಮುಕ್ತ ಸಂಚಾರ ಇಂದಿನಿಂದ

31KWR2
Published on

ಕಾರವಾರ; ಕಾರವಾರ- ಗೋವಾ ನಡುವೆ ಸೆಪ್ಟೆಂಬರ್ 1ರಿಂದ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಪ್ರಮೋದ ಸಾವಂತ ತಿಳಿಸಿದ್ದಾರೆ.

ಮರಾಠಿ ಪತ್ರಿಕೆಯೊಂದರಲ್ಲಿ ಈ ಸಂಬಂಧ ಸೋಮವಾರ ಸಾವಂತ ಹೇಳಿಕೆ ನೀಡಿದ್ದಾರೆ. ಕಾರವಾರ ಶಾಸಕಿ ರೂಪಾಲಿ ನಾಯ್ಕ ಇದನ್ನು ಖಚಿತಪಡಿಸಿದ್ದಾರೆ.

ರಾಜ್ಯಗಳ ಎಲ್ಲ ಗಡಿಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಂದ್ರ ಗೃಹ ಇಲಾಖೆ ಸೆ. 22ರಂದು ಆದೇಶ ಹೊರಡಿಸಿತ್ತು. ಅದರಂತೆ ಸೆ. 24ರಂದು ಕರ್ನಾಟಕ ಸರ್ಕಾರ ಎಲ್ಲ ಗಡಿಗಳಲ್ಲಿ ಜನ, ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ ಆದೇಶಿಸಿತ್ತು. ಆದರೆ, ಗೋವಾ ಸರ್ಕಾರ ಮಾತ್ರ ತನ್ನ ರಾಜ್ಯದೊಳಗೆ ಅನ್ಯರಾಜ್ಯದವರನ್ನು ಬಿಟ್ಟುಕೊಳ್ಳಲು ಷರತ್ತುಗಳನ್ನು ಮುಂದುವರಿಸಿತ್ತು. ಅಲ್ಲದೆ, ಹಣ ವಸೂಲಿಗೆ ಮುಂದಾಗಿತ್ತು. ಗಣೇಶ ಚತುರ್ಥಿಗೆ ತಮ್ಮ ಊರಿಗೆ ಬಂದ ಗೋವಾದಲ್ಲಿ ಉದ್ಯೋಗದಲ್ಲಿರುವ ಕಾರವಾರದ 300ಕ್ಕೂ ಅಧಿಕ ಜನ ತಲಾ 2 ಸಾವಿರ ರೂ. ಕೋವಿಡ್ ಪರೀಕ್ಷಾ ಶುಲ್ಕ ನೀಡಿ ಗೋವಾ ಪ್ರವೇಶಿಸಬೇಕಾದ ಪರಿಸ್ಥಿತಿ ಉಂಟಾಯಿತು. ಗೋವಾ ಸರ್ಕಾರದ ಈ ನೀತಿಗೆ ಕಾರವಾರದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಶಾಸಕಿ ರೂಪಾಲಿ ನಾಯ್ಕ ಅವರು ಗೋವಾ ಸಿಎಂ ಪ್ರಮೋದ ಸಾವಂತ ಅವರ ಜತೆ ಮಾತುಕತೆ ನಡೆಸಿದ್ದರು. ಸೆ. 1ರಿಂದ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಸಾವಂತ ಭರವಸೆ ನೀಡಿದ್ದಾರೆ ಎಂದು ರೂಪಾಲಿ ನಾಯ್ಕ ತಿಳಿಸಿದ್ದರು. ಈ ನಡುವೆ ಜಿಲ್ಲಾ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳ ಪ್ರಮುಖರು ಗೋವಾ ಗಡಿಯಲ್ಲಿ ಪ್ರತಿಭಟನೆ ನಡೆಸಿದ್ದರು.

ಕಾರವಾರದ ಉದ್ಯೋಗಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಗೋವಾ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದೆ. ಅವರು ನೀಡಿದ ಭರವಸೆಯಂತೆ ಸೆ.1 ರಿಂದ ಗೋವಾ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಪ್ರಕಟಿಸಿದ್ದು, ಅವರಿಗೆ ಧನ್ಯವಾದಗಳು. | ರೂಪಾಲಿ ನಾಯ್ಕ ಶಾಸಕಿ

5 ತಿಂಗಳ ನಂತರ ತೆರವು ಕಾರವಾರ ಹಾಗೂ ಗೋವಾ ನಡುವೆ ಅವಿನಾಭಾವ ಸಂಬಂಧವಿದೆ. ಕಾರವಾದ ಹಲವು ಕುಟುಂಬಗಳ ಸಂಬಂಧಿಕರು ಗೋವಾದಲ್ಲಿದ್ದಾರೆ. ಪ್ರತಿ ದಿನ ಮೀನು, ಹಾಲು, ತರಕಾರಿ ಮುಂತಾದ ವ್ಯಾಪಾರಗಳಿಗೂ ಕಾರವಾರದ ಜನ ಗೋವಾದ ಪ್ರದೇಶಗಳಿಗೆ ತೆರಳುತ್ತಾರೆ. ಅಷ್ಟ್ರೇ ಅಲ್ಲ, ಗೋವಾದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಮದ್ಯ ಹಾಗೂ ಪೆಟ್ರೋಲ್​ಗಾಗಿ ಹಲವರು ಅಲ್ಲಿಗೆ ತೆರಳುತ್ತಾರೆ. ಗೋವಾದವರು ಕಾರವಾರಕ್ಕೆ ಬಂದು ಮೀನು, ತರಕಾರಿ ಖರೀದಿಸುತ್ತಾರೆ. ಕಾರವಾರದ ಕನಿಷ್ಠ 5 ಸಾವಿರ ಜನ ಗೋವಾದಲ್ಲಿ ಉದ್ಯೋಗದಲ್ಲಿದ್ದಾರೆ. ಕಾರವಾರದ ತಮ್ಮ ಮನೆಗಳಿಂದಲೇ ಪ್ರತಿ ದಿನ ಗೋವಾಕ್ಕೆ ಓಡಾಡುವ 1 ಸಾವಿರದಷ್ಟು ಉದ್ಯೋಗಿಗಳಿದ್ದಾರೆ. ಆದರೆ, ಕರೊನಾ ಲಾಕ್​ಡೌನ್ ನಂತರ ಇವರ ಅಂತಾರಾಜ್ಯ ಸಂಚಾರಕ್ಕೆ ತಡೆ ಬಿದ್ದಿತ್ತು. ಐದು ತಿಂಗಳ ನಂತರ ಗೋವಾ ಗಡಿ ತೆರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net