

ಮಂಜುನಾಥ ಗದಗಿನ
ಮಹಾತ್ಮ ಗಾಂಧೀಜಿ ನಿಧನರಾದ ನಂತರ ಅವರ ಚಿತಾಭಸ್ಮವನ್ನು ದೇಶದ ವಿವಿಧ ಭಾಗಗಳಿಗೆ ರವಾನೆ ಮಾಡಲಾಯಿತು. ಈ ವೇಳೆ ಅವರ ಅನುಯಾಯಿಗಳು ಬೆಳಗಾವಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಅದನ್ನು ತಂದು ಹಾಕಿ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇಂದು ಆ ಸ್ಮಾರಕಗಳು ಅಭಿವೃದ್ಧಿ ಹೊಂದದೇ ಅನಾಥವಾಗಿವೆ.
ಮಹಾತ್ಮ ಗಾಂಧೀಜಿ 1948 ಜನವರಿ 30 ರಂದು ಹುತಾತ್ಮರಾದರು. ಈ ವೇಳೆ ಅವರ ಚಿಂತನೆಗಳು ಚಿರಸ್ಥಾಯಿ ಆಗಿ ಉಳಿಯಲು ಎಂಬ ಉದ್ದೇಶದಿಂದ ಬೆಳಗಾವಿ ರಾಮದುರ್ಗದ ಸುರೇಬಾನ, ಎಂ.ಕೆ.ಹುಬ್ಬಳ್ಳಿ, ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹೊರ ವಲಯದ ಮರಡಿ ಹಾಗೂ ಅನಗೋಳದ ಗಾಂಧಿ ಸ್ಮಾರಕ ಹೀಗೆ ಜಿಲ್ಲೆಯ ನಾನಾ ಕಡೆಗಳಲ್ಲಿ ಚಿತಾಭಸ್ಮ ತಂದು ಹಾಕಿ ನಿತ್ಯ ಆರಾಧನೆ ಮಾಡಲಾಯಿತು.
ಅನಗೋಳ: ಗಾಂಧೀಜಿ ಹುತಾತ್ಮರಾದ ನಂತರ ಅನಗೋಳದ ಅವರ ಅನುಯಾಯಿಗಳಾದ ಕಲ್ಲಪ್ಪ ಬಸಪ್ಪ ಬೆಂಡಿಗೇರಿ, ಹನಮಂತ ಸಾಯನಾಕ, ಗೋಡಬೋಲೆ ಸೇರಿದಂತೆ ಎಂಟು ಜನರು ಗಾಂಧೀಜಿ ಅವರ ಅಂತ್ಯಸ್ಮಾರ ನಡೆದ ದಿಲ್ಲಿಯ ರಾಜಘಾಟ್‌ಗೆ ಹೋಗಿ ಚಿತಾಭಸ್ಮ ತಂದು ಇಲ್ಲಿ ಹಾಕಿದರು. ನಂತರ ಅದರ ಮೇಲೆ ಕಟ್ಟೆ ಕಟ್ಟಿ ಗಾಂಧಿ ಮೂರ್ತಿ ಪ್ರತಿಷ್ಠಾಪಿಸಿ ಸ್ಮಾರಕ ನಿರ್ಮಾಣ ಮಾಡಿದರು. ಇದಾದ ನಂತರ ಪ್ರತಿದಿನ ಈ ಜಾಗದಲ್ಲಿ ಆಧ್ಯಾತ್ಮಿಕ ಪ್ರವಚನಗಳು ಸೇರಿ ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದರು. ನಂತರ ಎಲ್ಲವೂ ಸ್ಥಗಿತಗೊಂಡು ಮೌನ ಆವರಿಸಿಕೊಂಡಿತು. ಇದೀಗ ಈ ಸ್ಮಾರಕ ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದಲ್ಲಿ ಗಾಂಧೀಜಿ ಅಪಟ್ಟ ಅನುಯಾಯಿ ಆಗಿದ್ದ ನೀಲಕಂಠಜಿ ಗಣಾಚಾರಿ ಅವರು ರಾಜಘಾಟ್‌ಗೆ ಹೋಗಿ ಚಿತಾಭಸ್ಮ ತಂದು ಇಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡಿದ್ದರು. ಇದಾದ ನಂತರ ಚಿತಾಭಸ್ಮ ಇರುವ ಸ್ಥಳಕ್ಕೆ ಕಾಯಕಲ್ಪ ನೀಡಬೇಕು ಎಂಬ ಉದ್ದೇಶದಿಂದ ಊರಿನ ಗಣ್ಯರಾಗಿದ್ದ ದಿ. ಬಸಪ್ಪ ಶಿರೆಣ್ಣವರ ತಮ್ಮ ಜಮೀನು ದಾನವನ್ನಾಗಿ ನೀಡಿದರು.
ಇಲ್ಲಿ ಕಟ್ಟಡ ಕಟ್ಟಿ ಗಾಂಧಿ ಭವನ ನಿರ್ಮಾಣ ಮಾಡಿದರು. ಇದಾದ ನಂತರ ಗಾಂಧಿ ಸೇವಾ ಟ್ರಸ್ಟ್ ಸ್ಥಾಪನೆ ಮಾಡಿನ ಇಲ್ಲಿ ಕೈಮಗ್ಗ ಮೂಲಕ ಗಾಂಧೀಜಿ ಅವರ ಆಶಯದಂತೆ ಖಾದಿ ಉತ್ಪಾದನೆ ಮಾಡಿ ಅನೇಕ ಕುಟುಂಬಗಳಿಗೆ ಉದ್ಯೋಗ ನೀಡಲಾಯಿತು. ಆದರೆ, ಇದೀಗ ಈ ಗಾಂಧಿ ಭವನ ಪಾಳು ಬಿದ್ದು ಅನೈತಿಕ ಚಟುವಕೆಗಳ ತಾಣವಾಗಿ ಮಾರ್ಪಟ್ಟಿದೆ. ಒಳಗೆ ಇರುವ ಕೈಮಗ್ಗಗಳು ಹಾಳಾಗಿ ಹೋಗಿವೆ. ಇನ್ನೂ ಚಿತಾಭಸ್ಮ ಇರುವ ಸ್ಥಳ ಅನಾಥವಾಗಿದೆ. ಹೀಗಾಗಿ ಈ ಸ್ಥಳವನ್ನು ಅಭಿವೃದ್ಧಿ ಮಾಡಬೇಕು. ಇಲ್ಲವಾದರಲ್ಲಿ ಈ ಸ್ಥಳಲ್ಲಿ ಉದ್ಯಾನವ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಇನ್ನೂ ಎಂ.ಕೆ.ಹುಬ್ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ಪಕ್ಕದಲ್ಲಿ ಇರುವ ಗಾಂಧೀಜಿ ಚಿತಾಭಸ್ಮ ಕೂಡ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಗಾಂಧೀಜಿ ಹುತ್ಮಾತ್ಮರಾದ ನಂತರ ಗದಗ ಕೆಲವು ಬೆಳಗಾವಿ ಮೂಲಕ ಚಿತಾಭಸ್ಮವನ್ನು ಎಂ.ಕೆ.ಹುಬ್ಬಳಿ ಮೂಲಕ ತೆಗೆದುಕೊಂಡು ಹೋಗುವಾಗ ಎಂ.ಕೆ.ಹುಬ್ಬಳ್ಳಿಯ ಕೆಲವು ಅವರಿಂದ ಚಿತಾಭಸ್ಮ ಪಡೆದುಕೊಂಡು ಇಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ ಎಂದು ಹಿರಿಕರು ಹೇಳುತ್ತಾರೆ. ಆದರೆ, ವರ್ಷಕ್ಕೊಂದು ಸಾರಿ ಸುಣ್ಣ ಹಚ್ಚುವುದು ಬಿಟ್ಟರೆ ಇಲ್ಲಿಯೂ ಯಾವುದೇ ಅಭಿವೃದ್ಧಿ ಆಗಿಲ್ಲ.
ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹೊರ ವಲಯದಲ್ಲಿಯೂ ಗಾಂಧೀಜಿ ಚಿತಾಭಸ್ಮ ಇರುವ ಸ್ಥಳವನ್ನು ಕಾಣಬಹುದಾಗಿದೆ. ಗಾಂಧೀಜಿ ಚಿತಾಭಸ್ಮ ಬೆಳಗಾವಿಗೆ ಬಂದಾಗ ಇಲ್ಲಿಯ ಸ್ವಾತಂತ್ರ್ಯ ಯೋಧ ಶಿವಪ್ಪಜ್ಜ ಅವರು ಭಸ್ಮ ತಂದು ಊರಿನ ಹೊರವಲಯದಲ್ಲಿ ಅರ್ಜುನಪ್ಪ ಕ್ಯಾತನವರ ಅವರಿಗೆ ಸೇರಿದ್ದ ಮರಡಿಯಲ್ಲಿ ಭಸ್ಮ ಹಾಕಿ ಆಲದ ಮರ ನೆಟ್ಟರು ಎಂದು ಇತಿಹಾಸ ಹೇಳುತ್ತಿದೆ. ಹೀಗೆ ಬೆಳಗಾವಿಯಲ್ಲಿ ಗಾಂಧೀಜಿ ಅವರ ಹೆಜ್ಜೆ ಗುರುತುಗಳನ್ನು ಹರಸುತ್ತಾ ಹೋದರೆ ಅನೇಕ ರೋಚಕ ಸಂಗತಿಗಳು ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆದರೆ, ಗಾಂಧೀಜಿ ಅವರ ಚಿತಾಭಸ್ಮ ಇರುವ ಈ ಸ್ಥಳು ಇದೀಗ ಅಭಿವೃದ್ಧಿ ಸ್ಪರ್ಶಕ್ಕಾಗಿ ಕಾಯ್ದು ಕುಳಿತಿವೆ.