

ನಂಜನಗೂಡು: ರಾಜರ ಒಡೆತನದ ಆಡಳಿತದ ಅವಧಿಯಲ್ಲಿ ಸಮಾಜ ಸುಧಾರಣೆಗೆ ಬಸವಣ್ಣನವರು ಪಣತೊಟ್ಟು ಕಾಯಕದ ಮಹತ್ವವನ್ನು ಸಾರಿದರು. ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆ ಮಾಡಿ ಸ್ವಾವಲಂಬಿ ಜೀವನ ನಡೆಸಲು ಬಸವಣ್ಣನವರು ಮಾರ್ಗ ತೋರಿಸಿದರು ಎಂದು ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವಣ್ಣನವರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿ ಮಾತನಾಡಿದರು. ಜನಾರಾಡುವ ಭಾಷೆಯಲ್ಲಿ ಮಾತೃ ಭಾಷೆಯನ್ನು ಬಳಸಿ ವಚನಗಳನ್ನು ತಿಳಿಸಿಕೊಟ್ಟರು. ವಚನಗಳ ಮೂಲಕ ಕ್ರಾಂತಿ ನಡೆಸಿ, ಜನ ಭಾಷೆಯನ್ನೇ ದೈವ ಭಾಷೆಯಾನ್ನಾಗಿ ಮಾಡಿದ ಬಸವಣ್ಣ ಇಂದಿಗೂ ಪ್ರಸ್ತುತ. ವಚನ ಓದುವುದು ಸುಲಭ, ಆದರೆ ಅಳವಡಿಸಿಕೊಳ್ಳುವುದು ತುಂಬಾ ಕಷ್ಟ. ವಚನಗಳು ಮತ್ತು ಬಸವಣ್ಣನವರು ಯಾವಾಗಲೂ ಪ್ರಸ್ತುತವಾಗಿದ್ದಾರೆ. ಕಾಯಕ ಮಾಡಿ ಬದುಕಬೇಕು ಎಂದು ಆ ದಿನಮಾನದಲ್ಲೇ ಬಸವಣ್ಣ ಹೇಳಿಕೊಟ್ಟಿದ್ದಾರೆ. ಪೂಜೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇಷ್ಟ ಲಿಂಗವನ್ನು ಕೈಯಲ್ಲಿಟ್ಟುಕೊಂಡು ಪೂಜಿಸಿದರೆ ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಹಾಗಾಗಿ ಅವರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದು ನುಡಿದರು.
ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಚುಂಚನಹಳ್ಳಿ ಶ್ರೀ ಕಡಕಲಕಟ್ಟೆ ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಇಷ್ಟ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡಿರುವ ಬಸವಣ್ಣನವರ ಪ್ರತಿಮೆಯನ್ನು ಗ್ರಾಮದಲ್ಲಿ ಅನಾವರಣ ಮಾಡಲಾಗಿದೆ. ಪ್ರತಿಮೆಯ ತಳಭಾಗದಲ್ಲಿ ಬಸವಣ್ಣನವರ ವಚನಗಳನ್ನು ಬರೆಸಲಾಗಿದೆ. ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದಷ್ಟೇ ಅಲ್ಲ. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
12ನೇ ಶತಮಾನದಲ್ಲೇ ಅನುಭವ ಮಂಟಪದ ಪರಿಕಲ್ಪನೆ ಕಟ್ಟಿಕೊಟ್ಟವರು ಬಸವಣ್ಣ ಎನ್ನುವುದು ವಿಶ್ವದ ಬಹುತೇಕರಿಗೆ ತಿಳಿದಿಲ್ಲ. ಪ್ರಜಾತಾಂತ್ರಿಕ ಚಿಂತನೆಯ ತಿರುಳಾದ ಅನುಭವ ಮಂಟಪ, ದುಡಿಮೆ ಮಹತ್ವ ತಿಳಿಸುವ ಕಾಯಕವೇ ಕೈಲಾಸ, ಸಾಮಾಜಿಕ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಹೀಗೆ ಮಹತ್ವಪೂರ್ಣ ಕೊಡುಗೆಗಳನ್ನು ವಿಶ್ವಕ್ಕೆ ನೀಡಿದ ಮಹಾನ್ ದಾರ್ಶನಿಕ ಬಸವಣ್ಣ ಎಂದು ವಿಶ್ಲೇಷಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಮಾತನಾಡಿ, ಬಸವಣ್ಣನ ಮೂರ್ತಿ ನಮಗೆಲ್ಲಾ ಕೀರ್ತಿಯಾಗಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಗೌರವಿಸಲಾಗುತ್ತಿದೆ. ಭಕ್ತಿ ಎಂದರೆ ಬಸವ, ಬಸವಣ್ಣನವರ ಮೂರ್ತಿ ಕೂರಿಸಿ ಪೂಜಿಸುವ ಜತೆಗೆ ಅವರ ತತ್ವ, ಆದರ್ಶಗಳು, ವಿಚಾರಗಳನ್ನು ಮೈಗೊಡಿಸಿಕೊಳ್ಳಬೇಕು. ಅಂದಿಗಿಂತಲೂ ಇಂದು ಬಸವಣ್ಣ ಎಲ್ಲರಿಗೂ ಬೇಕಾಗಿದ್ದಾರೆ. ಅಕ್ಷರ ದಾಸೋಹದ ಮಹತ್ವವನ್ನು ಬಸವಣ್ಣನವರು ಸಾರಿದರು ಎಂದರು.
ಚುಂಚನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆ ಮಾಡಲಾಗಿದ್ದು ಸುಮಾರು 4 ಅಡಿ ಎತ್ತರ, 3 ಅಡಿ ಅಗಲವಿರುವ ಇಷ್ಟಲಿಂಗ ಪೂಜಾನಿರತ ಭಂಗಿಯ ಶಿಲಾ ಪ್ರತಿಮೆಯಾಗಿದೆ. ಮೈಸೂರು ಜಿಲ್ಲೆಯ ಮೊಸನಬಾಯನಹಳ್ಳಿಯ ಶಿಲ್ಪಿ ಕೆ.ರಾಜಾಚಾರ್ ಅವರು ಬಸವೇಶ್ವರರ ಪುತ್ಥಳಿಯನ್ನು ಸಿದ್ಧಪಡಿಸಿದ್ದು, ಚುಂಚನಹಳ್ಳಿಯ ದಿ.ಚಂದ್ರಪ್ಪನವರ ಪುತ್ರ ಮಹದೇವಪ್ಪ ಅವರ ಕುಟುಂಬ ವರ್ಗ ಪ್ರತಿಮೆಯ ದಾನಿಗಳಾಗಿದ್ದಾರೆ.
ಇದಕ್ಕೂ ಮುನ್ನ ಮಂಗಳವಾದ್ಯದೊಂದಿಗೆ ಗೋಪುರಕ್ಕೆ ಕಳಶಾರೋಹಣ, ಕುಂಭಾಭಿಷೇಕ ನಡೆದವು. ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಮೆಯ ದಾನಿಗಳನ್ನು ಸನ್ಮಾನಿಸಲಾಯಿತು.
ಚುಂಚನಹಳ್ಳಿಯ ಶ್ರೀ ಕಡಕಲಕಟ್ಟೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಸೋಮಹಳ್ಳಿ ಶ್ರೀ ವೀರ ಸಿಂಹಾಸನ ಶೀಲಾ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಹರವೆ ಶ್ರೀ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಚಾಮರಾಜನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಮರಿಯಾಲ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠದ ಶ್ರೀ ಮುರುಘ ರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆಂಪಣ್ಣ ಭಾಗವಹಿಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ಸಾವು ನೋವುಗಳಾಗಿವೆ. ಇದನ್ನು ನಾವು ಖಂಡಿಸುತ್ತೇವೆ. ಅಷ್ಟೊಂದು ಕಠೋರವಾಗಿ ಪ್ರವಾಸಿಗರನ್ನು ಕೊಲ್ಲಬಾರದಿತ್ತು. ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೀಠಾಧ್ಯಕ್ಷರು ಸುತ್ತೂರು ಮಠ