

ಬಾಗಲಕೋಟೆ: ಪೂಜೆ, ಪುನಸ್ಕಾರಗಳಿಗ್ಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದವರು ಕಲ್ಯಾಣ ನಾಡಿನ ಶ್ರೇಷ್ಟ ಶರಣ ನೂಲಿಯ ಚಂದಯ್ಯ ಎಂದು ಪ್ರಭಾರ ಅಪರ ಜಿಲ್ಲಾಽಕಾರಿ ಸಂತೋಷ ಜಗಲಾಸರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ವಚನಗಳ ಮೂಲಕ ಕಾಯಕ ಕಡ್ಡಾಯ ಎಂಬ ಆಶಯ ಸಾರಿದ್ದಾರೆ. ಸಮುದಾಯಗಳು ಸಮುದಾಯದವರು ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕುವುದು ಹಾಗೂ ಅವರ ಹೆಜ್ಜೆಯಲ್ಲಿ ನಡೆಯವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಾಯಕ ಶರಣರು ಯಾವುದೇ ಜಾತಿಗೆ ಸೀಮಿತರಲ್ಲ. ನಮ್ಮವರು ಎಂಬ ಭಾವನೆ ಹಾಗೂ ಅಭಿಯಾಮದಿಂದಾದರೂ ಸಮಾಜಗಳು ಸುಧಾರಣೆಯತ್ತ ಸಾಗಬೇಕಾಗಿರುವುದು ಇಂದು ಅವಶ್ಯವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಸೂಳೆಭಾವಿಯ ರಾಮಯ್ಯಸ್ವಾಮಿ ಪ್ರೌಢಶಾಲೆಯ ಶಿಕ್ಷಕ ಟಿ.ಬಿ.ಭಜಂತ್ರಿ ಮಾತನಾಡಿ, ಕೊರವ ಎನ್ನುವ ಪದ ಜಾತಿ ವಾಚಕ ಪದ ಅಲ್ಲ. ವೃತ್ತಿಯ ಹಿನ್ನಲೆಯಿಂದ ಬಂದಿರುವಂತಹದ್ದೆ ಹೊರತು ಜಾತಿ ಸೂಚಕ ಪದ ಅಲ್ಲ. ನೂಲಿಯ ಚಂದಯ್ಯನವರು ೧೨ನೇ ಶತಮಾನದ ಬಸವಣ್ಣನವರ ಸಮಕಾಲಿನವರಾಗಿದ್ದಾರೆ. ಇತರರಿಂದ ಬೀಕ್ಷೆ ಬೇಡುವುದು, ಅವರನ್ನು ಬೈಯುವುದು, ಪೀಡಿಸುವುದು, ತೊಂದರೆ ಕೊಡುವುದು ಮತ್ತು ಜಂಗಮ ಮತ್ತು ಲಿಂಗಕ್ಕೆ ಅರ್ಪಿಸುವುದು ಒಳ್ಳೆಯದಲ್ಲ. ದೇಹವನ್ನು ಸಂಪಾದಿಸುವುದು, ಮನಸ್ಸು ಸಂಪಾದಿಸುವುದು ಮುಖ್ಯವಾಗಿದೆ ಎಂದು ಸಾರಿ ಸಾರಿ ಹೇಳಿದ್ದಾರೆ ಎಂದು ತಿಳಿಸಿದರು.
ನೂಲಿಯ ಚಂದಯ್ಯ ಒಬ್ಬ ಕಾಯಕಯೋಗಿಯಾಗಿದ್ದು, ಹುಲ್ಲಿನಿಂದ ಅಥವಾ ಹುಲ್ಲಿನಿಂದ ಹಗ್ಗವನ್ನು ತಯಾರಿಸಿದವರು. ವಿಜಯಪುರದ ಶಿವಣಗಿ ಎಂಬಲ್ಲಿ ಹುಟ್ಟಿದ ಇವರು ಅನುಭವನ ಮಂಟಪದ ಪ್ರಮುಖರು ಇಷ್ಟಲಿಂಗವನ್ನು ಹಗ್ಗ ಮಾರುವಂತೆ ಮಾಡಿದವರು ಚಂದಯ್ಯನವರು. ಬದುಕಿಗೆ ಕಾಯಕ ಮುಖ್ಯವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೆರೆದವರಾಗಿದ್ದಾರೆ ಎಂದರು.
ಸಮುದಾಯದ ಮುಖಂಡರಾದ ಶೇಖರ ಭಜಂತ್ರಿ, ಪರಶುರಾಮ ಭಜಂತ್ರಿ ಮಾತನಾಡಿ, ಸಮುದಾಯ ಸಂಘಟನೆಗೊಂಡಾಗ ಮಾತ್ರ ಅಭಿವೃದ್ದಿ ಸಾಧ್ಯವಿದೆ ಎಂದು ತಿಳಿಸಿದರು. ಅಶೋಕ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ ಎಂ.ಬಿ.ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಸೇರಿದಂತೆ ಸಮುದಾಯದ ಮುಖಂಡರಾದ ಬಾಬು ಭಜಂತ್ರಿ, ಹನಮಂತ ಭಜಂತ್ರಿ, ಮೋಹನ ಕಟ್ಟಿಮನಿ, ಸುರೇಶ ಭಜಂತ್ರಿ, ರಮೇಶ ಭಜಂತ್ರಿ, ಪರಶುರಾಮ ಭಜಂತ್ರಿ ಉಪಸ್ಥಿತರಿದ್ದರು.