

ಹನೂರು: ಸಮೀಪದ ಕಾಮಗೆರೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸಾವಿರಾರು ಭಕ್ತರ ಸಮುಖದಲ್ಲಿ ಚಂದ್ರಮಂಡಲೋತ್ಸವವು (ಮಹಾಜ್ಯೋತಿ) ವಿಜೃಂಭಣೆಯಿಂದ ಜರುಗಿತು.
ಚಂದ್ರ ಮಂಡಲೋತ್ಸವದ ಅಂಗವಾಗಿ ಗ್ರಾಮದ ಕೆರೆ ಏರಿಯ ಬಳಿ ಇರುವ ಮಹದೇಶ್ವರ ದೇಗುಲ ಹಾಗೂ ದೊಡ್ಡಬೀದಿಯ ಸಿದ್ದಪ್ಪಾಜಿ ದೇಗುಲ ಸೇರಿದಂತೆ ಗ್ರಾಮದ ಪ್ರತಿ ಬೀದಿಯನ್ನು ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಗ್ರಾಮಸ್ಥರು ಕುರುಬನಕಟ್ಟೆ ಕಂಡಾಯವನ್ನು ಗ್ರಾಮಕ್ಕೆ ತಂದು ಪೂಜೆ ಸಲ್ಲಿಸಿದರು. ಕಂಡಾಯಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ರಾತ್ರಿ 10ರ ವೇಳೆಯಲ್ಲಿ ಅರ್ಚಕರು ಗ್ರಾಮದ ಮಹದೇಶ್ವರ ದೇಗುಲದ ಬಳಿ ಇರುವ ಕೆರೆಗೆ ತೆರಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಹದೇಶ್ವರ ದೇಗುಲದಿಂದ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ದೊಡ್ಡ ಬೀದಿಯಲ್ಲಿರುವ ಸಿದ್ದಪ್ಪಾಜಿ ದೇಗುಲ ತಲುಪಿತು. ಮೆರವಣಿಗೆಯುದ್ದಕ್ಕೂ ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.
ದೇಗುಲದ ಸಮೀಪದಲ್ಲಿ ಕಬ್ಬಿಣದ ಸಲಾಕೆ ಹಾಗೂ ಬಿದಿರಿನ ಕಡ್ಡಿಗಳಿಂದ ಸುಮಾರು 30 ಅಡಿ ಎತ್ತರದಲ್ಲಿ ಸಿದ್ಧಪಡಿಸಿದ್ದ ಮಹಾಜ್ಯೋತಿಯನ್ನು ರಾತ್ರಿ 12 ಗಂಟೆಗೆ ಬೆಳಗಿಸಲಾಯಿತು. ನೆರೆದಿದ್ದ ಭಕ್ತರು ಚಂದ್ರ ಮಂಡಲೋತ್ಸವ ಕಣ್ತುಂಬಿಕೊಂಡರು. ಈ ವೇಳೆ ಜನರು ಮಹಾಜ್ಯೋತಿಗೆ ಕಟ್ಟಿದ್ದ ಹಗ್ಗವನ್ನು ಎಳೆಯುವುದರ ಮೂಲಕ ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಾ.ನಗರ, ಕೊಳ್ಳೇಗಾಲ, ಹನೂರು, ಬಂಡಳ್ಳಿ, ಮಂಗಲ, ಕಣ್ಣೂರು, ಗುಂಡಾಪುರ, ಬೂದುಬಾಳು, ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮಧುವನಹಳ್ಳಿ ಗ್ರಾಮಗಳಿಂದ ಜನರು ಆಗಮಿಸಿದ್ದರು.
ಕಂಡಾಯ ಉತ್ಸವ: ಗ್ರಾಮಕ್ಕೆ ವಿವಿಧ ಕಡೆಗಳಿಂದ ಆಗಮಿಸಿದ ಕಂಡಾಯಗಳಿಗೆ ಸೋಮವಾರ ಬೆಳಗ್ಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇವರು ಗುಡ್ಡರು ಕಂಡಾಯವನ್ನು ಹೊತ್ತು ಗ್ರಾಮದ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ಉತ್ಸವ ನೆರವೇರಿಸಲಾಯಿತು. ಈ ವೇಳೆ ಮಹಿಳೆಯರು ಕಂಡಾಯ ಉತ್ಸವಕ್ಕೆ ಪೂಜೆ ಸಲ್ಲಿಸಿದರು.