ಕೊಳ್ಳೇಗಾಲ: ಆನ್‌ಲೈನ್ ಆ್ಯಪ್‌ನಲ್ಲಿ ಸಾಲ ಸಿಗುವುದಾಗಿ ನಂಬಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿ ವಂಚನೆಗೊಳಗಾದ ಯುವಕ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಕಾಮಗೆರೆ ಗ್ರಾಮದ ರಾಜಪ್ಪ (27) ಮೃತ. ಆತ್ಮಹತ್ಯೆಗೂ ಮುನ್ನ ವಂಚನೆ ಮಾಡಿದ ಕಂಪನಿ, ಕೆಲವರ ಹೆಸರು ಹೇಳಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ.
ಈತನಿಗೆ ಆನ್‌ಲೈನ್ ಆ್ಯಪ್‌ನಲ್ಲಿ 5 ಲಕ್ಷ ರೂ.ಸಾಲ ನೀಡುವುದಾಗಿ ಖಾಸಗಿ ಆನ್‌ಲೈನ್ ಆ್ಯಪ್‌ನ ಸಿಬ್ಬಂದಿ ನಂಬಿಸಿದ್ದರು. ಹಾಗಾಗಿ ಮೂವರು ಸ್ನೇಹಿತರ ಬಳಿ ಹಣ ಪಡೆದು 2.38 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದ. ಕೊನೆಗೆ ಆನ್‌ಲೈನ್ ಆ್ಯಪ್‌ನವರು ಸಾಲ ಕೊಡಲಿಲ್ಲ. ಇದರಿಂದ ಸಾಲಭಾದೆ ತಾಳಲಾರದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಾಲಕರು ಆತನನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್‌ಐ ಸುಪ್ರೀತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತದೇಹವನ್ನು ಉಪವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಯಿತು. ಸಹೋದರ ಬಾಬು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.