ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ

17 svr 01
Published on

ಸವಣೂರ: ನಗರೋತ್ಥಾನ ಯೋಜನೆಯಡಿ ಪಟ್ಟಣದ ದಂಡಿನಪೇಟೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಕಳಪೆಯಾಗಿದೆ ಹಾಗೂ ವಿಳಂಬವಾಗಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಮಂಗಳರವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ಮಹೇಶ ಮುದಗಲ್ಲ ಮಾತನಾಡಿ, ಶಿಂಪಿಗಲ್ಲಿ ಗಣೇಶ ದೇವಸ್ಥಾನದಿಂದ ರಾಜ್ಯ ಹೆದ್ದಾರಿವರೆಗೆ ಕಾಮಗಾರಿ ಆರಂಭಿಸಿ 6 ತಿಂಗಳಾದರೂ ಪೂರ್ಣಗೊಂಡಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಒಂದಾದರೆ, ಕಾಮಗಾರಿ ನಿರ್ವಹಿಸುವವರು ಬೇರೆ ಗುತ್ತಿಗೆದಾರರು. ಹೀಗಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕೂಡಲೆ ಕಾಮಗಾರಿ ಆರಂಭಿಸಬೇಕು ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಪ್ರತಿಕ್ರಿಯಿಸಿ, ಕಾಮಗಾರಿ ವಿಳಂಬ ಕುರಿತು ಗುತ್ತಿಗೆ ಪಡೆದ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಕಾಮಗಾರಿ ಆರಂಭಕ್ಕೆ ನಾಲ್ಕು ದಿನ ಕಾಲಾವಕಾಶ ನೀಡಬೇಕು ಎಂದರು.

ಆದರೆ, ಇದಕ್ಕೊಪ್ಪದ ಪುರಸಭೆ ಸದಸ್ಯರಾದ ಮಹೇಶ ಮುದಗಲ್ಲ, ಅಜೀಂಬೇಗ್ ಮಿರ್ಜಾ, ಪೀರಸಾಬ್ ಗವಾರಿ, ಶಿವಾನಂದ ಅರಳಿಕಟ್ಟಿ ಇತರರು ಮಾ. 19ರ ಒಳಗಾಗಿ ಕಾಮಗಾರಿ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು.

ಸಾರ್ವಜನಿಕರಾದ ಶಿದ್ದಲಿಂಗಪ್ಪ ತೆಗ್ಗಿಹಳ್ಳಿ, ಹೆಗ್ಗಪ್ಪ ಕಲಾಲ, ಲಕ್ಷ್ಮಣ ಜಾಧವ, ಈರಣ್ಣ ತೆಗ್ಗಿಹಳ್ಳಿ, ಜಾಫರ ಮನಿಯಾರ, ಕುಮಾರ ತೆಗ್ಗಿಹಳ್ಳಿ, ನಾಗಪ್ಪ ತೆಗ್ಗಿಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net