

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದ ಹೊರ ವಲಯದಲ್ಲಿರುವ ನೀರು ಶುದ್ಧೀಕರಣ ಘಟಕದ ಸುತ್ತಲೂ 45 ಲಕ್ಷ ರೂ. ವೆಚ್ಚದಲ್ಲಿ ಸುತ್ತುಗೋಡೆ ನಿರ್ಮಿಸಲು ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಚಾಲನೆ ನೀಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿಮಾತನಾಡಿ, ಯಳಂದೂರು ಪಟ್ಟಣ ಪಂಚಾಯಿತಿಗೆ ನೀರೊದಗಿಸುವ ಉತ್ತಂಬಳ್ಳಿ ನೀರು ಶುದ್ಧೀಕರಣ ಘಟಕದ ರಕ್ಷಣೆಗಾಗಿ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರಲ್ಲದೆ, ನಿರ್ಮಾಣಕ್ಕೂ ಮೊದಲು ಶುದ್ಧೀಕರಣ ಘಟಕದ ಸ್ಥಳವನ್ನು ಸರ್ವೇ ಮಾಡಿಸಿ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೊಳ್ಳೇಗಾಲ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಯಳಂದೂರು ಪ.ಪಂ.ಅಧ್ಯಕ್ಷ ಎಸ್.ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯ ರವಿ, ರಂಗನಾಥ್, ಮಹೇಶ್, ನಾಮನಿರ್ದೇಶಿತ ಸದಸ್ಯ ಲಿಂಗರಾಜು ಮೂರ್ತಿ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್, ಇಂಜಿನಿಯರ್ ನಾಗೇಂದ್ರ, ಮುಖಂಡರಾದ ಮಹಾಲಿಂಗಸ್ವಾಮಿ ಮತ್ತಿತರಿದ್ದರು.