

ಹುಣಸೂರು: ಅಸ್ಪಶ್ಯತೆಯೆಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವ ಕಾರ್ಯ ಪ್ರತಿಯೊಬ್ಬರ ಮನೆ, ಮನಗಳಿಂದ ಆಗಬೇಕಿದೆ ಎಂದು ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಜ್ಞಾನಜ್ಯೋತಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಗಾವಡಗೆರೆಯ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗಾವಡಗೆರೆ ಹೋಬಳಿ ಮಟ್ಟದ ಅಸ್ಪಶ್ಯತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶತಮಾನಗಳಿಂದ ಅಸ್ಪಶ್ಯತೆ, ಜಾತೀಯತೆ ಅವಮಾನದಲ್ಲಿ ಬದುಕುತ್ತಿದ್ದ ದಲಿತ ಸಮುದಾಯಗಳಿಗೆ ಒಂದು ಧ್ವನಿಯಾಗಿ ನಿಂತವರು ಜಗಜ್ಯೋತಿ ಬಸವಣ್ಣನವರು. ಅನುಭವ ಮಂಟಪದ ಮೂಲಕ ಸಮಾನತೆ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ ಸಮಾಜಕ್ಕೆ ನೀಡಿದರು. ಇಂತಹ ಸಾಮಾಜಿಕ ಬದಲಾವಣೆಯಿಂದ ದಲಿತರಿಗೆ ಆತ್ಮಗೌರವ ಬಂದಂತಾಯಿತು. ಮಾತನಾಡುವ, ತಮ್ಮ ಅಭಿಪ್ರಾಯವನ್ನು ಮಂಡಿಸುವ ಅವಕಾಶ ಸಿಕ್ಕಿತು. ನಂತರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬಸವಣನವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಂವಿಧಾನ ರಚನೆ ಮಾಡಲು ಕಾರಣವಾಯಿತು ಎಂದು ನುಡಿದರು.
ಸಂವಿಧಾನ ಬಂದು 75 ವರ್ಷಗಳೇ ಕಳೆದರೂ ಇಂದಿಗೂ ಕೆಲವು ಭಾಗಗಳಲ್ಲಿ ಅಸ್ಪಶ್ಯತೆ, ಅಸಮಾನತೆ ಜೀವಂತವಿರುವುದು ನೋವಿನ ಸಂಗತಿ. ದಲಿತರನ್ನು ಇತರೆ ಸಮುದಾಯಗಳು ನೋಡುವ ಮನಸ್ಥಿತಿ ನಮ್ಮಲ್ಲಿ ಬದಲಾಗಬೇಕು. ಕೇವಲ ಕಾನೂನುಗಳಿಂದ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕಷ್ಟದ ಕೆಲಸ. ಜನರಲ್ಲಿ ಜಾಗೃತಿ ಮೂಡಿಸಿ ಈ ಅನಿಷ್ಟ ಪದ್ಧತಿಯನ್ನು ನಾವು ನೀವೆಲ್ಲರೂ ಸೇರಿ ತೊಲಗಿಸಬೇಕಾಗಿದೆ. ಬದಲಾವಣೆ ಎಲ್ಲಿಂದಲೋ ಬರುತ್ತದೆ ಎಂದು ಕುಳಿತರೆ ಆಗದು. ನಮ್ಮ ಮನೆ, ಮನ, ಹಳ್ಳಿಗಳಲ್ಲಿ ಬದಲಾವಣೆಯಾಗುವ ಕೆಲಸವಾಗಬೇಕು. ಸರ್ಕಾರಿ ಅಧಿಕಾರಿಗಳು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು. ಆಗ ಮಾತ್ರ ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಇಂತಹ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ ಎಂದರು.
ಉಪವಿಭಾಗ ಮಟ್ಟದ ಪ.ಜಾತಿ, ಪ.ಪಂ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ್ ಮಲ್ಲಾಡಿ ಮಾತನಾಡಿ, ಸಾವಿರಾರು ವರ್ಷಗಳಿಂದ ದಲಿತರಿಗೆ ಬೀಸುವ ಗಾಳಿ, ಸೂರ್ಯನ ಬೆಳಕು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲೂ ನಿರ್ಬಂಧಪಡಿಸಲಾಗಿತ್ತು. ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ತದನಂತರದಲ್ಲಿ ಅಂಬೇಡ್ಕರ್ ಬರುವ ತನಕ ದಲಿತರ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ದಲಿತರ ರಕ್ಷಣೆಗೆ ಕಾನೂನುಗಳಿದ್ದರೂ ಜಾರಿ ಮಾಡುವ ಅಧಿಕಾರಿಗಳ ಮನಸ್ಸು ಮಲಿನವಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಮನೋಭಾವ ಲಾಭ ನಷ್ಟಗಳಲ್ಲಿ ಕೂಡಿದೆ. ದಲಿತರು ಅಪಮಾನಗಳನ್ನು ಅನುಭವಿಸುತ್ತಿದ್ದರೂ ಎಂದೂ ಹಿಂಸಾತ್ಮಕ ಮಾರ್ಗ ಹಿಡಿಯದೆ ತಮ್ಮ ನೋವನ್ನು ತಾವೇ ಅನುಭವಿಸುತ್ತಾ ಸಮಾನತೆಯ ಅವಕಾಶಕ್ಕಾಗಿ ಪರಿತಪಿಸುತ್ತಿರುವುದನ್ನು ಇತರೆ ಸಮುದಾಯಗಳು ಒಳಗಣ್ಣಿನಿಂದ ನೋಡಬೇಕಾಗಿದೆ ಎಂದರು.
ಮಾನವ ಹಕ್ಕುಗಳ ಹೋರಾಟಗಾರ ಗುರುಪ್ರಸಾದ್ ಮಾತನಾಡಿ, ಕಾನೂನು ಬದ್ಧವಾಗಿ ಎಲ್ಲರಿಗೂ ಸಮಾನವಾದ ಅವಕಾಶಗಳಿದ್ದರೂ ಜಾತಿ ಆಧಾರದಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಮುದಾಯವನ್ನು ಅಪಮಾನಿಸುವುದು ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹ ಕಾನೂನುಗಳನ್ನು ಜನರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ಜ್ಞಾನ ಜ್ಯೋತಿ ಸಂಸ್ಥೆಯ ಹೇಮಾವತಿ, ಗಾವಡಗೆರೆ ಉಪತಹಸೀಲ್ದಾರ್ ಶೋಭಾ, ಆರ್.ಐ.ಹೇಮಂತ್, ಕಂದಾಯ ಅಧಿಕಾರಿ ವಿಜಯ್ ಕುಮಾರ್, ಪಲ್ಲವಿ, ಗಾವಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ಪಿಡಿಒ ಮಂಜುಳಾ, ಜಾಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ ಬಾಯಿ, ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರಿ, ಬಿಳಿಗೆರೆ ಪಿಡಿಒ ಶೀಲಾ, ದಲಿತ ಮುಖಂಡರಾದ ಆಂಜನೇಯ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕಿಯರು, ಆರೋಗ್ಯ, ಕಂದಾಯ, ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಜರಿದ್ದರು. ಬೆಳಕು ಕಲಾ ತಂಡದ ಕಿರಿಜಾಜಿ ಗಜೇಂದ್ರ, ಹೊನ್ನೇನಹಳ್ಳಿ ವಸಂತ ಕಲಾ ತಂಡದ ಕಲಾವಿದರು ಬೀದಿ ನಾಟಕ, ಜಾಗೃತಿ ಗೀತೆಗಳನ್ನು ಹಾಡಿದರು.