ಕಾನೂನುಗಳ ಕನ್ನಡೀಕರಣವಾಗಲಿ *ಉಳವಿಯಲ್ಲಿ ಉತ್ತರ ಕನ್ನಡ ಜಿಲ್ಲಾ 22 ನೇ ಸಾಹಿತ್ಯ ಸಮ್ಮೇಳನ *ನಿವೃತ್ತ ನ್ಯಾಯಮೂತಿ ಎಚ್.ಎನ್.ನಾಗಮೋಹನದಾಸ ಅಭಿಪ್ರಾಯ

17KWR2
Published on

ವಿಜಯವಾಣಿ ಸುದ್ದಿಜಾಲ ಜೊಯಿಡಾ
ದೇಶದ ಬಹುತೇಕ ಕಾನೂನುಗಳು ಇಂಗ್ಲಿಷ್‌ನಲ್ಲಿವೆ. ಅವುಗಳನ್ನು ಕನ್ನಡೀಕರಣ ಮಾಡಿ, ಸಾಮಾನ್ಯ ಜನರಿಗೆ ಅವುಗಳ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಶಿಸಿದರು.
ಉಳವಿಯಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲಾ 22 ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯ ಜನ ಕಾನೂನನ್ನು ಅರಿತು ಅದನ್ನು ಪಾಲನೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಈಡೇರುತ್ತದೆ ಎಂದರು.
ಪ್ರಜಾ ಪ್ರಭುತ್ವ ,ಜಾತ್ಯತೀತತೆ,ಸಾಮಾಜಿಕ ನ್ಯಾಯಕ್ಕೆ ಗೌರವ ನೀಡುವ ಕಾರ್ಯ ಕಸಾಪ ಮಾಡುತ್ತಿದೆ. ಜೊಯಿಡಾದ ಆದಿವಾಸಿಗಳ ಬಡತನ ನಿವಾರಣೆ ಮಾಡುವ ಕಾರ್ಯ ಮಾಡಬೇಕು ಎಂದರು.
ಅತಿಥಿಯಾಗಿದ್ದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಆದಿ ಕವಿ ಪಂಪನ ಕರ್ಮಭೂಮಿ ಉತ್ತರ ಕನ್ನಡ. ಕನ್ನಡ ನಾಡನ್ನು ಒಡೆಯುವ ದುಃಷ್ಟ ಶಕ್ತಿಗಳಿಗೆ ದಿಟ್ಟ ಉತ್ತರ ನೀಡುವ ನಿರ್ಣಯ ಸಮ್ಮೆಳನದಲ್ಲಾಗಲಿ ಎಂದರು.
ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿ, ಉಳವಿ ಬಸವಣ್ಣನ ಕ್ಷೇತ್ರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೆಳನ ಮಾಡಿರುವುದು ಸಂತಸದ ವಿಷಯ.ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಉಳವಿ ಕ್ಷೇತ್ರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.ಕನ್ನಡದ ಭಾಷೆ ಅನ್ನದ ಭಾಷೆ,ಬದುಕಿನ ಭಾಷೆ ಆಗಬೇಕು. ವಚನ ಸಾಹಿತ್ಯವನ್ನು ಭಾರತದ ತುಂಬೆಲ್ಲ ಪಸರಿಸುವ ಕಾರ್ಯ ಆಗಬೇಕು ಎಂದರು.
ಪಾಂಡುರಂಗ ಪಟಗಾರ ವಂದಿಸಿದರು. ಎಸಿ ವಿಜಯಲಕ್ಷ್ಮೀ ರಾಯಕೋಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಉಳವಿ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಸಂಜಯ ಕಿತ್ತೂರ, ಹಿರಿಯ ಸಾಹಿತಿಗಳಾದ ಎನ್.ಆರ್.ನಾಯಕ, ಭಾಗೀರಥಿ ಹೆಗಡೆ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ರೋಹಿದಾಸ ನಾಯ್ಕ ಉಪಸ್ಥಿತರಿದ್ದರು. ವಿಷ್ಣು ಪಟಗಾರ ಮತ್ತು ಸುಧೀಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್ ನಾಯ್ಕ ಸ್ವಾಗತಿಸಿದರು.
ವಿವಿಧ ಗೋಷ್ಠಿಗಳು
21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸೈಯ್ಯದ್ ಜಮೀರುಲ್ಲಾ ಷರೀಫ್ ಅವರು ಕನ್ನಡ ಧ್ವಜ ಹಸ್ತಾಂತರಿಸಿದರು. ಗ್ರಾಪಂ ಅಧ್ಯಕ್ಷೆ ಮಂಗಲಾ ಮಿರಾಶಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಮಂಜುನಾಥ ಮುಕಾಶಿ ನಾಡ ಧ್ಜಜಾರೋಹಣ ಮಾಡಿದರು. ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಉಳವಿಯ ಬೀದಿಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಶಾಂತಾರಾಮ ನಾಯಕ ಹಿಚಕಡ ಅವರ ಮೆರವಣಿಗೆ ನಡೆಯಿತು. ಉತ್ತರ ಕನ್ನಡದ ಬದುಕು, ಬವಣೆ ಕುರಿತು ಮೊದಲ ಗೋಷ್ಠಿ, ಮಾಧ್ಯಮ ಮತ್ತು ವರ್ತಮಾನದ ಸವಾಲುಗಳ ಕುರಿತು ಎರಡನೇ ಗೋಷ್ಠಿ ನಡೆಯಿತು. ಈ ನಡುವೆ ಮಧ್ಯಾಹ್ನ ಕವಿಗೋಷ್ಠಿಯೂ ಆಯೋಜನೆಯಾಗಿತ್ತು.
ಶಿಕ್ಷಣದಲ್ಲಿ ಸಮಾನತೆ ತರಬೇಕು
ಶಿಕ್ಷಣದಲ್ಲಿ ಸಮಾನತೆ ತರುವುದು ಇಂದಿನ ತುರ್ತು ಅಗತ್ಯ ಎಂದು 22 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶಾಂತಾರಾಮ ನಾಯಕ ಹಿಚಕಡ ಹೇಳಿದರು.
ಸರ್ವಾಧ್ಯಕ್ಷತೆಯ ಭಾಷಣ ಮಾಡಿದ ಅವರು, ಭಾರತದ ಪ್ರಥಮ ಶಿಕ್ಷಣ ಆಯೋಗವು ಅದನ್ನೇ ಹೇಳಿದೆ. ಆದರೆ, ಇಂದಿಗೂ ಶಿಕ್ಷಣದಲ್ಲಿ ಸಮಾನತೆ ಸಾಧ್ಯವಾಗಿಲ್ಲ ಎಂದರು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಸರಾಗಿದ್ದ ಉತ್ತರ ಕನ್ನಡ ಜಿಲ್ಲೆಗೆ ಇತ್ತೀಚೆಗೆ ಜಾತಿ, ಧರ್ಮ, ಕೋಮು ದ್ವೇಷದ ಕಿಚ್ಚು ತಟ್ಟುತ್ತಿದೆ. ಲೇಖಕರು ಜಿಲ್ಲೆಯ ಸಾಮಾಜಿಕ ಬದ್ಧತೆಯಿಂದ ಅಭಿವೃದ್ಧಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಕಲೆ, ಸಂಸ್ಕೃತಿ, ಇಲ್ಲಿನ ಪರಿಸರವನ್ನು ಬಣ್ಣಿಸಿದ ನಾಯಕರು, ಪ್ರಗತಿಗೆ ಪ್ರೀತಿಯೇ ಪ್ರೇರಕ ಶಕ್ತಿ. ಪ್ರೀತಿಯ ಕೊರತೆಯಿಂದ ಮನುಷ್ಯ ನಾನಾ ವಿಕಾರಗಳಿಗೆ ಒಳಗಾಗುತ್ತಿದ್ದಾನೆ ಎಂದರು.
ಇಂದು ಸಮಾರೋಪ:
ಡಿ.18 ರಂದು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ ಮುನ್ನೋಟದ ಕುರಿತು ಬೆಳಗ್ಗೆ 9.30 ಕ್ಕೆ ಯಲ್ಲಾಪುರದ ಪ್ರಮೋದ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ನಡೆಯಲಿದೆ. 11.30 ಕ್ಕೆ ಡಾ.ಮಾಧವಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ, ಮಧ್ಯಾಹ್ನ 1 ಗಂಟೆಗೆ ಸುಬ್ರಾಯ ಮತ್ತಿಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ, 3 ಗಂಟೆಗೆ ವಚನ ವಿಚಾರ ಗಾಯನ ಕುರಿತು ಶಂಕರಯ್ಯ ಕಲ್ಮಠ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. 4.30 ಕ್ಕೆ ಕಸಾಪ ಗೌರವ ಪುರಸ್ಕಾರ ಇರಲಿದೆ. ಸಾಯಂಕಾಲ 5.30 ಕ್ಕೆ ಕಸಾಪ ಗೌರವ ಪುರಸ್ಕಾರ ನೀಡಲಾಗುವುದು. 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಬರಹಗಾರ್ತಿ ವಿನಯಾ ಒಕ್ಕುಂದ ಸಮಾರೋಪ ಭಾಷಣ ಮಾಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net