ಕಾನೂನು ತನ್ನ ಕೆಲಸ ಮಾಡುತ್ತೆ

380edbe0-904d-4ab7-b6e6-231b26668565
Published on

ಬಾಗಲಕೋಟೆ: ರಾಜಕೀಯವಾಗಿ ಪ್ರಭಾವ ಹೊಂದಿದ್ದ ಹಾಸನ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಬೇರೆ ರೀತಿಯಲ್ಲಿ ಸದ್ದು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಅಲ್ಲಿ ಮಾನವಕುಲ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಸಂತ್ರಸ್ತರಿಗೆ ಆಚೆಗೆ ಬಂದು ಹೇಳಲು ಧೈರ್ಯ ಇರಲಿಲ್ಲ. ನಾನು ಉಸ್ತುವಾರಿ ಸಚಿವನಾದ ಬಳಿಕ ಧೈರ್ಯ ತುಂಬಿದ್ದೇನೆ. ಈಗ ಧೈರ್ಯವಾಗಿ ಮುಂದೆ ಬರುತ್ತಿದ್ದಾರೆ. ಕಾನೂನು ತನ್ನ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ಈಗ ಬೆಳಕಿಗೆ ಬಂದಿರುವ ಪ್ರಕರಣಗಳು ನಿನ್ನೆ ಮೊನ್ನೆ ನಡೆದಿರುವುದು ಅಲ್ಲ. ಬಹಳಷ್ಟು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವುದು. ಆಗ ಸಂತ್ರಸ್ತರಿಗೆ ಧೈರ್ಯ ಇರಲಿಲ್ಲ. ಈಗ ಧೈರ್ಯವಾಗಿ ಮುಂದೆ ಬಂದು ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಎಂಎಲ್‌ಸಿ ಸೂರಜ್ ರೇವಣ್ಣ ಅವರ ಮೇಲಿನ ಅಸಹಜ ಲೈಂಗಿಕ ಪ್ರಕರಣದ ಬಗ್ಗೆ, ಕಲಂ ೩೭೭ನಲ್ಲಿದೆ. ಕಾನೂನಾತ್ಮಕ ಏನು ಕ್ರಿಯೆ ನಡೆಯಬೇಕು ಅದು ಆಗುತ್ತದೆ. ಇದರಲ್ಲಿ ಯಾರದೇ ಹಸ್ತಕ್ಷೇಪ, ಒತ್ತಡ ಹಾಕಲು ನಾವು ಬಿಡುವುದಿಲ್ಲ. ಸರ್ಕಾರದ ಮೇಲಾಗಲಿ, ತನಿಖಾಧಿಕಾರಿಗಳ ಮೇಲಾಗಲಿ ಒತ್ತಡ ಹಾಕಲು ಬಿಡಲ್ಲ. ತನಿಖಾಧಿಕಾರಿಗಳು ಸರ್ವ ಸ್ವತಂತ್ರರಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬುವುದು ನಮ್ಮ ಅಭಿಲಾಸೆಯಾಗಿದೆ ಎಂದರು.

ಸೂರಜ್ ಹಾಗೂ ಪ್ರಜ್ವಲ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಈ ವಯಸ್ಸಿನಲ್ಲಿ ಆಘಾತ ತಂದಿರುವ ವಿಚಾರ ಪ್ರತಿಕ್ರಿಯಿಸಿದ ಸಚಿವರು, ಇದೊಂದು ದುರದೃಷ್ಟಕರ. ಇಳಿ ವಯಸ್ಸಿನಲ್ಲಿ ಮಾನಸಿಕವಾಗಿ ಈ ರೀತಿ ಹಿಂಸೆ ಆಗುತ್ತಿದೆ. ಯಾರೇ ಆಗಲಿ ಹಿರಿಯರಾದವರಿಗೆ ಮಾನಸಿಕ ಹಿಂಸೆ ಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.

ಗ್ಯಾರಂಟಿ ಮುಂದುವರೆಸುತ್ತೇವೆ :
ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ಪರಾಮರ್ಶಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಕೆಲ ಶಾಸಕರೇ ಹೇಳಿಕೆ ನೀಡುತ್ತಿರುವ ಬಗ್ಗೆ, ಇದು ನಮ್ಮ ಶಾಸಕರ ಹೇಳಿಕೆಗಳು ಅಲ್ಲ, ಮಾಧ್ಯಮಗಳ ಸೃಷ್ಟಿ ಎಂದು ಬೊಟ್ಟು ಮಾಡಿದ ಸಚಿವ ರಾಜಣ್ಣ, ಶಾಸಕರು ಚರ್ಚೆ ಮಾಡುತ್ತಿದ್ದಾರೆ ಎನ್ನುವುದು ನಿಮ್ಮ(ಮಾಧ್ಯಮ) ಸೃಷ್ಟಿ ಎಂದರು.

ರೊಬ್ಬರೂ ಸಹ ಗ್ಯಾರಂಟಿ ನಿಲ್ಲಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಸಿಎಂ ಕೂಡ ಗ್ಯಾರಂಟಿ ನಿಲ್ಲಿಸಲ್ಲ, ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಕೂಡ ಈ ಬಗ್ಗೆ ಸ್ಪಷ್ಟಪಡಿಸುತ್ತಿದ್ದು, ಬಡವರಿಗೆ ನೀಡಿದ ಸೌಲಭ್ಯಗಳು ಕುಂಟಿತವೂ ಆಗಲ್ಲ, ಕಡಿತವೂ ಆಗಲ್ಲ ಎಂದು ಹೇಳಿ, ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿಕೆ ವೈಯಕ್ತಿಕವಾಗಿದ್ದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net