ಕಾಡುಪ್ರಾಣಿಗಳ ದಾಳಿಗೆ ಅಡಕೆ, ಬಾಳೆ ಹಾಳು

16sdp1a
Published on

ಸಿದ್ದಾಪುರ: ತಾಲೂಕಿನ ಹಸರಗೋಡ ಹಾಗೂ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ 300ಕ್ಕೂ ಹೆಚ್ಚು ಹೆಕ್ಟೇರ್ ಅಡಕೆ ತೋಟದಲ್ಲಿ ಕಾಡುಪ್ರಾಣಿಗಳು ಹಲವು ದಿನಗಳಿಂದ ದಾಳಿ ನಡೆಸಿ ಅಡಕೆ ಸಸಿ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ. ಇದಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

ತಂಗಾರಮನೆ, ಶಮೇಮನೆ, ಬಾಳೇಸರ, ಹಸರಗೋಡ, ಹೇರೂರು, ಕುರಾ, ಕರ್ಜಿಗೆ ಮತ್ತಿತರ ಗ್ರಾಮಗಳಲ್ಲಿ ಕಾಡುಕೋಣ, ಕಾಡುಹಂದಿ, ಕ್ಯಾಸಾಳ, ಮಂಗಗಳು ದಾಳಿ ನಡೆಸಿ ಅಡಕೆ ಸಸಿ, ಒಂದೆರಡು ವರ್ಷದಲ್ಲಿ ಬೆಳೆ ಬರಬಹುದಾದ ಅಡಕೆ ಗಿಡ, ಈಗಾಗಲೇ ಬಿಟ್ಟ ಅಡಕೆ ಮಿಳ್ಳೆಗಳು, ಕೊಕೋ, ತೆಂಗು, ಫಸಲು ಬಂದ ಬಾಳೆ, ತರಕಾರಿಗಳನ್ನು ಕಾಡುಪ್ರಾಣಿಗಳು ನಾಶಪಡಿಸಿವೆ. ಈ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಂಗಾರಮನೆಯ ಗೋಪಾಲಕೃಷ್ಣ ಹೆಗಡೆ, ಭಾಸ್ಕರ ಹೆಗಡೆ, ಶಶಿಧರ ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ, ಶಮೇಮನೆಯ ಗಣೇಶ ಹೆಗಡೆ, ಅಶೋಕ ಹೆಗಡೆ ಇತರರು ಹೇಳುತ್ತಾರೆ.

ಸೋಲಾರ್ ಬೇಲಿ ಅಳವಡಿಸಿ:ಬೆಳೆರಕ್ಷಣೆಗೆ ಅರಣ್ಯ ಇಲಾಖೆಯಿಂದ ಶಾಶ್ವತ ಪರಿಹಾರ ರೂಪವಾಗಿ ತೋಟದ ಸುತ್ತಲೂ ಸೋಲಾರ್ ಬೇಲಿ ನಿರ್ವಿುಸಲು ಆರ್ಥಿಕ ಸಹಕಾರ ಹಾಗೂ ಬೆಳೆ ಹಾನಿ ಆಗಿರುವುದಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಎಲ್ಲ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸುತ್ತಿದ್ದು ಶಾಶ್ವತ ಪರಿಹಾರಕ್ಕೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆ ಸೋಲಾರ್ ಬೇಲಿ ನಿರ್ವಿುಸಿ ಬೆಳೆ ರಕ್ಷಣೆಗೆ ಮುಂದಾಗಿದೆ. ಅದರಂತೆ ಉ.ಕ. ಜಿಲ್ಲೆಯಲ್ಲಿಯೂ ಸೋಲಾರ್ ಬೇಲಿ ನಿರ್ವಿುಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಸಿ.ಎನ್. ಹೆಗಡೆ ತಂಗಾರಮನೆ ಬಾಳೇಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ

ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಆದರೆ, ಸೋಲಾರ್ ಬೇಲಿ ನಿರ್ಮಾಣ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸೋಲಾರ್ ಬೇಲಿ ನಿರ್ವಿುಸಲು ಅವಕಾಶ ಇದ್ದಲ್ಲಿ ಆ ಕುರಿತು ಬೆಳೆಗಾರರಿಗೆ ಮಾಹಿತಿ ನೀಡಲಾಗುವುದು. | ರಘು ಎಸಿಎಫ್ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net