ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸಿದ್ಧತೆ

15blrp4.
Published on

ಬೇಲೂರು: ಬೇಲೂರು-ಆಲೂರು-ಸಕಲೇಶಪುರ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಪೈಕಿ ಕೆಲ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಐದು ಸಾಕಾನೆಗಳನ್ನು ತಾಲೂಕಿನ ಬಿಕ್ಕೋಡು ಸಮೀಪ ಕರೆ ತರಲಾಗಿದೆ.


ತಾಲೂಕಿನ ಮಲೆನಾಡು ಪ್ರದೇಶ ಸೇರಿದಂತೆ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿರುವ ಪ್ರತ್ಯೇಕ ಕಾಡಾನೆಗಳ ಚಲನ ವಲನ ಗಮನಿಸಲು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಎರಡು ಕಾಡಾನೆಗಳ ಕೊರಳಲ್ಲಿದ್ದ ರೇಡಿಯೋ ಕಾಲರ್ ಕಳಚಿ ಬಿದ್ದಿದೆ. ಇದರಿಂದಾಗಿ ಕಾಡಾನೆಗಳ ಗುಂಪು ಎಲ್ಲಿದೆ ಎಂಬುದರ ಮಾಹಿತಿ ಸಿಗುತ್ತಿರಲಿಲ್ಲ. ಆದರೆ ಸಿಬ್ಬಂದಿ ಮತ್ತು ಗ್ರಾಮಸ್ಥರ ಸಹಕಾರದಿಂದ ಆನೆಗಳಿರುವ ಬಗ್ಗೆ ಮಾಹಿತಿ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವಂತಾಗಿತ್ತು. ಅಲ್ಲದೆ ಈ ಆನೆಗಳು ಎಲ್ಲಿವೆ, ಎಲ್ಲಿಗೆ ಹೋಗಿವೆ ಎಂಬ ಮಾಹಿತಿಯ ಕೊರತೆ ಕಾಡುತ್ತಿತ್ತು.


ಈ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಇಲಾಖೆ ಮುಂದಾಗಿದ್ದು ಬೇಲೂರು-ಆಲೂರು- ಸಕಲೇಶಪುರದಲ್ಲಿ ಕಾರ್ಯಾಚರಣೆ ನಡೆಸಿ ರೇಡಿಯೋ ಕಾಲರ್ ಬೆಲ್ಟ್ ಅಳವಡಿಸುವುದಕ್ಕಾಗಿ ನಾಗರಹೊಳೆ ವಿಭಾಗದ ತಿತಿಮತಿಯ ಮತ್ತಿಗೋಡು ಕ್ಯಾಂಪ್‌ನಿಂದ ಅಭಿಮನ್ಯು ಹಾಗೂ ಮಹೇಂದ್ರ ಎಂಬ ಎರಡು ಗಂಡು ಆನೆ, ಕುಶಾಲನಗರದ ದುಬಾರೆ ಕ್ಯಾಂಪ್‌ನಿಂದ ವಿಕ್ರಂ, ಅಜ್ಜಯ್ಯ, ಪ್ರಶಾಂತ ಎಂಬ ಮೂರು ಗಂಡು ಆನೆಗಳನ್ನು ಕರೆತಂದು ಬಿಕ್ಕೋಡು ಸಮೀಪ ಉಳಿಸಲಾಗಿದೆ.


ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಕಾವಾಡಿಗರ ಸಹಕಾರದೊಂದಿಗೆ ಎರಡು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಇಲ್ಲಿಂದಲೇ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಇದು ಮುಗಿದ ನಂತರ ಉಳಿದುಕೊಳ್ಳಲು ಬಿಕ್ಕೋಡು ಸಮೀಪ ವ್ಯವಸ್ಥೆ ಮಾಡಲಾಗಿದೆ. ಸಾಕಾನೆಗಳನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.


ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ಹಾಸನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು, ಸಕಲೇಶಪುರ ಸಹಾಯಕ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿಗಳಾದ ಬೇಲೂರಿನ ವಿನಯ್‌ಕುಮಾರ್, ಸಕಲೆಶಪುರದ ಶಿಲ್ಪ, ಯಸಳೂರಿನ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net