

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ ಸುಳಗೋಡು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಜೋಳದ ಬೆಳೆ ನಾಶವಾಗಿದೆ.
ಕೊಡಗಿನ ಆಲೂರು ಸಿದ್ದಾಪುರದ ನಿಡ್ತ ಅರಣ್ಯ ಪ್ರದೇಶದಿಂದ ಹೊರಬಂದಿರುವ ಕಾಡಾನೆಗಳು ಸುಳಗೋಡು ಗ್ರಾಮದ ಸಂದೀಪ್, ರೋಹಿಣಿ, ಧನಂಜಯ, ಸುಶೀಲಮ್ಮ ಎಂಬುವರ ಜಮೀನಿಗೆ ಭಾನುವಾರ ರಾತ್ರಿ ಲಗ್ಗೆ ಇಟ್ಟಿವೆ. ಹುಲುಸಾಗಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆ ತಿಂದು ತುಳಿದು ನಾಶಪಡಿಸಿವೆ. ಸೋಮವಾರ ಬೆಳಗ್ಗೆ ರೈತರು ಜಮೀನು ಬಳಿ ತೆರಳಿ ನೋಡಿದಾಗ ಆನೆಗಳ ದಾಳಿಗೆ ಜೋಳದ ಬೆಳೆ ಹಾಳಾಗಿರುವುದು ಕಂಡುಬಂದಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಡ್ತ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನ ಗುಂಪಿನಿಂದ ಹೊರಬಂದಿರುವ ಮೂರು ಆನೆಗಳು ಜಮೀನಿಗೆ ನುಗ್ಗಿವೆ. ರಾತ್ರಿ ವೇಳೆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿ ಹಗಲು ಹೊತ್ತಿನಲ್ಲಿ ಕಾಡು ಸೇರಿಕೊಳ್ಳುತ್ತಿವೆ. ಆನೆಗಳ ಚಲನ ವಲನ ತಿಳಿದು ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ದೇವೇಂದ್ರ ತಿಳಿಸಿದರು.
ಕೆಲ ದಿನಗಳಿಂದ ಕಟ್ಟೇಪುರ ಮತ್ತು ಬೈಸೂರು ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಬೀಡು ಬಿಟ್ಟು ಸ್ಥಳೀಯಲ್ಲಿ ಭಯ ಹುಟ್ಟಿಸಿದ್ದವು. ಜಮೀನಿಗೆ ತೆರಳಲು ತೊಂದರೆ ಅನುಭವಿಸಿದ್ದರು. ಬಳಿಕ ಮಾಗಲು, ಬಾಗದಾಳು ಸುತ್ತಮುತ್ತ ಅಡ್ಡಾಡುತ್ತಿದ್ದ ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಿದ್ದರು. ಇದೀಗ ಕೊಡಗಿನ ಗಡಿ ಭಾಗದಿಂದ ಬಂದು ಕೊಣನೂರು ಹೋಬಳಿ ಕಾಡಂಚಿನ ಗ್ರಾಮಗಳಲ್ಲಿ ಬೆಳೆ ಹಾನಿಪಡಿಸುತ್ತಿವೆ. ಆನೆಗಳ ಹಾವಳಿಯಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.