ಕಾಡಾನೆಗಳ ದಾಳಿಗೆ ಕಾಫಿ ಗಿಡಗಳು, ಪೈಪ್ ಧ್ವಂಸ

18 vpt. 1.2
Published on

ವಿರಾಜಪೇಟೆ: ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಪೊದುಕೇರಿ ಪಂದ್ಯನ್ ಪಾಡ್ ಎಂಬಲ್ಲಿ ಎರಡು ದಿನಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಬೆಳೆದಿರುವ ಕಾಫಿ ಗಿಡಗಳು, ಅಡಕೆ ಮರಗಳು, ಬಾಳೆ ಇನ್ನಿತರ ಫಸಲು ನೀಡುತ್ತಿರುವ ಗಿಡಗಳನ್ನು ಹಾನಿಗೊಳಿಸಿವೆ.

ಸುಮಾರು ಮೂವತ್ತು, ನಲ್ವತ್ತು ವರ್ಷಗಳಿಂದ ದಷ್ಟ ಪುಷ್ಟವಾಗಿ ಬೆಳೆದು ನಿಂತಿರುವ ಕಾಫಿ ಗಿಡಗಳು ಕಾಡಾನೆ ದಾಳಿಗೆ ಧ್ವಂಸವಾಗಿವೆ. ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಚರ್ಚಿಸಿದರು. ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ಪತ್ರ ನೀಡಿದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರುವುದಿಲ್ಲ. ಈ ಭಾಗದಲ್ಲಿ ಕಾಫಿ ತೋಟಕ್ಕೆ ನೀರು ಹಾಯಿಸುವ ಕಾಫಿ ಬೆಳೆಗಾರರೂ ಇದ್ದಾರೆ. ತೋಟದಲ್ಲಿ ಅಳವಡಿಸಿರುವ ಪೈಪ್‌ಗಳನ್ನು ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಕಾರ್ಮಿಕರು ಕಾಡಾನೆಗಳ ಮತ್ತು ವನ್ಯಮೃಗಗಳ ದಾಳಿಯ ಹೆದರಿಕೆಯಿಂದ ತೋಟಗಳಿಗೆ ದಿನನಿತ್ಯ ಕಾಯಕಕ್ಕೆ ಬಾರದೆ ಹಿಂದೇಟು ಹಾಕುತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾನಿಗೆ ಒಳಗಾದ ತೋಟಕ್ಕೆ ಪರಿಶೀಲನೆಗೆ ಬಂದು ಚಿತ್ರಗಳನ್ನು ತೆಗೆದು ಹಿಂದಿರುಗುವುದು ಸಾಮಾನ್ಯವಾಗಿದೆ. ಸನಿಹದಲ್ಲೇ ಅರಣ್ಯ ಇಲಾಖೆಯ ವಸತಿ ಗೃಹಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಬ್ಬಂದಿ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಪರಿಹಾರದ ಮೊತ್ತಕ್ಕೆ ಹಲವಾರು ಬಾರಿ ಕಚೇರಿಗೆ ಅಲೆಯಬೇಕು ಎಂದರು.

ಮಾಕುಟ್ಟ ವಲಯದ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಸಂತೋಷ್ ಹೂಗಾರ್ ಮಾತನಾಡಿ, ಬ್ರಹ್ಮಗಿರಿ ಅರಣ್ಯ ವಲಯದ ವ್ಯಾಪ್ತಿಯ ವಿ.ಬಾಡಗ ಎಂಬಲ್ಲಿ ಕಾಡಾನೆ ಮಾನವ ಸಂಘರ್ಷದ ಬಗ್ಗೆ ಮಾಹಿತಿ ಲಭ್ಯದ ಮೇರೆಗೆ ಭೇಟಿಯಾಗಿದ್ದೇನೆ. ಗ್ರಾಮಸ್ಥರು ಹೇಳಿರುವಂತೆ ಅರಣ್ಯ ಅಂಚಿನಲ್ಲಿ ಕಂದಕ ನಿರ್ಮಾಣ ಅಪೂರ್ಣಗೊಂಡಿರುವುದು ಮತ್ತು ಸೋಲಾರ್ ಬೇಲಿ ನಿರ್ವಹಣೆ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಸ್ಥಿತಿಯ ಬಗ್ಗೆ ಪತ್ರ ಬರೆಯಲಾಗುತ್ತದೆ. ಕಂದಕ ನಿರ್ಮಾಣ ಕಾರ್ಯ ಮುಂದುವರಿಸಲಾಗುತ್ತದೆ, ಅಲ್ಲದೆ ಸೋಲಾರ್ ಬೇಲಿ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ಎರಡು ವರ್ಷದ ಅವಧಿಗೆ ನೀಡಲಾಗುತ್ತಿದೆ. ಕಾಡಾನೆಗಳು ಅರಣ್ಯದಿಂದ ದಾಟುವ ಸಂದರ್ಭ ಹಾಗೂ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದ ಸೋಲಾರ್ ಬೇಲಿಗೆ ಅಳವಡಿಸಲಾದ ವಿದ್ಯುತ್ ಬಿರಡೆಯು ಹಾನಿಯಾಗುತ್ತದೆ. ಕೆಲವು ತಾಂತ್ರಿಕ ಕಾರಣಗಳಿಂದ ಸೋಲಾರ್ ಬೇಲಿಯಲ್ಲಿ ದೋಷಗಳು ಕಂಡುಬಂದಿದೆ. ಅತೀ ಶೀಘ್ರದಲ್ಲಿ ನ್ಯೂನತೆ ಸರಿಪಡಿಸಲಾಗುವುದು ಮತ್ತು ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಲು ಉನ್ನತ ಮಟ್ಟದ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸಭೆ ಕರೆಯಲಾಗುತ್ತದೆ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಅರಣ್ಯ ಇಲಾಖೆಯ ಸಿಬ್ಬಂದಿ, ಕಂಜಿತಂಡ ಪೂವಣ್ಣ, ಧರ್ಮಜಾ ಚೆಂಗಪ್ಪ ಚರಣ್ ಚೇಮಿರ ಕಾಶಿ, ಪ್ರಕಾಶ್ ಪೂವಯ್ಯ, ಮಳವಂಡ ಗಿರೀಶ್, ಅನೂಪ್ ಗಣಪತಿ, ತಮ್ಮಯ್ಯ, ಕಲನ್, ಬೋಪಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net