

ಹನೂರು: ತಾಲೂಕಿನ ಪೊನ್ನಾಚಿ ಹಾಗೂ ಮರೂರು ಗ್ರಾಮದಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಕಾಡಾನೆ ಹಾವಳಿ ತಡೆಗಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದೆರಡು ತಿಂಗಳಿನಿಂದ ಒಂಟಿ ಸಲಗವೊಂದು ಗ್ರಾಮಕ್ಕೆ ಲಗ್ಗೆಯಿಡುತ್ತಿದ್ದು, ಮನೆ ಬಳಿಯಿರುವ ತೆಂಗಿನಮರ, ಹಲಸಿನಮರ ಹಾಗೂ ಮಾವಿನ ಮರವನ್ನು ನಾಶಗೊಳಿಸಿದೆ. ಅಲ್ಲದೇ, ಜಮೀನಿಗೆ ನುಗ್ಗಿ ಮೋಟಾರ್ ಹಾಗೂ ನೀರಾವರಿ ಪರಿಕರಗಳನ್ನು ನಾಶಪಡಿಸಿದೆ. ಮಂಗಳವಾರ ರಾತ್ರಿ ಗ್ರಾಮದ ಸಮೀಪ ಕಾಡಾನೆ ಆಗಮಿಸಿ ಆತಂಕ ಸೃಷ್ಟಿಸಿದ್ದು, ಗ್ರಾಮಸ್ಥರು ಕಾಡಿಗೆ ಓಡಿಸಿದ್ದಾರೆ.
ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವುದರಿಂದ ಕೆಲವು ರೈತರು ಕೃಷಿ ಮಾಡುವುದನ್ನೇ ಸ್ಥಗಿತಗೊಳಿಸಿದ್ದು, ಜಮೀನನ್ನು ಪಾಳು ಬಿಟ್ಟಿದ್ದಾರೆ. ಇತ್ತ ರಾತ್ರಿ ವೇಳೆ ಜನರು ಭಯದಿಂದ ದಿನ ದೂಡುವಂತಾಗಿದೆ. ಆನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಸಂಬಂಧಿಸಿದವರು ಇನ್ನಾದರೂ ಇತ್ತ ಗಮನಹರಿಸಿ ಆನೆಗಳ ಹಾವಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.