ಕಾಟಾಚಾರಕ್ಕೆ ನರೇಗಾ ಸಭೆ

1102 hulsur 01
Published on

ಹುಲಸೂರು: ಎರಡು ವರ್ಷದಿಂದ ಹುಲಸೂರು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಅಡಿ ಕೂಲಿ ನೀಡುತ್ತಿಲ್ಲ, ಜಾಬ್ ಕಾರ್ಡ್ ಸಮರ್ಪಕವಾಗಿ ಕೊಟ್ಟಿಲ್ಲ, ಕೆಲಸ ಕೇಳಿದ್ರೆ ಬೇಕಾಬಿಟ್ಟಿ ಉತ್ತರ ನೀಡ್ತಾರೆ. ಈಗ ಇಷ್ಟುದ್ದ ಲೆಕ್ಕ ಹೇಳುತ್ತಿದ್ದೀರಿ. ನಮಗೆ ಮೊದಲು ಕೆಲಸ ಕೊಡಿ, ಆಮೇಲೆ ಲೆಕ್ಕ ಹೇಳಿ…
ಪಟ್ಟಣದ ಗ್ರಾಪಂ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ನರೇಗಾ ಸಭೆಯಲ್ಲಿ ಕೂಲಿ ಕಾರ್ಮಿಕರ ಆಕ್ರೋಶದ ನುಡಿಗಳು ಇವು.

ಸಭೆಯಲ್ಲಿ ಮಾತನಾಡಿದ ಕಾರ್ಮಿಕರು, ಜನರಿಗೆ ಸಮರ್ಪಕ ಮಾಹಿತಿ ನೀಡದೆ, ಬೆರಳೆಣಿಕೆಯಷ್ಟು ಜನರೊಂದಿಗೆ ಗ್ರಾಪಂ ಸಭೆ ನಡೆಸುತ್ತಿದ್ದೀರಿ. ಜಾಬ್ ಕಾರ್ಡ್ ನೀಡಿಲ್ಲ. ಈಗ ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸಾಮಾಜಿಕ ಪರಿಶೋಧನ ಕಾರ್ಯಕ್ರಮ ವ್ಯವಸ್ಥಾಪಕ ಸಂಜುಕುಮಾರ ನಂದಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿನ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು. ೨೦೨೨ -೨೩ನೇ ಸಾಲಿನ ಖರ್ಚು ವೆಚ್ಚ, ನರೇಗಾ ಅಡಿ ೧.೧೮ ಲಕ್ಷ ರೂ. ಖರ್ಚಾದ ವಿವರ ಓದಿ ಹೇಳಿದರು.
ಈ ವೇಳೆ ನಂದಿ ಅವರನ್ನು ತಡೆದ ಕಾರ್ಮಿಕರು ಕೆಲಸವೇ ಕೊಟ್ಟಿಲ್ಲ. ಲೆಕ್ಕ ಹೇಳಬೇಡಿ. ಮೊದಲು ದುಡಿಯುವ ಕೈಗೆ ಕೆಲಸ ಕೊಡಿ ಎಂದು ಪಟ್ಟು ಹಿಡಿದರು. ಪಿಡಿಒ ಸಂದೀಪ ಬಿರಾದಾರ ಮಧ್ಯಪ್ರವೇಶಿಸಿ ಜಾಬ್ ಕಾರ್ಡ್ ಇಲ್ಲದೆ ಕೆಲಸ ಕೊಡಲು ಸಾಧ್ಯವಿಲ್ಲ. ತಾಂತ್ರಿಕ ದೋಷದಿಂದ ಕಾರ್ಡ್ ಬಂದ್ ಆಗಿವೆ ಎಂದು ಹಾರಿಕೆ ಉತ್ತರ ನೀಡಿದರು.

ಅಧಿಕಾರಿಗಳ ವಿರುದ್ಧ ಕೂಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ, ಸಭೆಯಿಂದ ನಿರ್ಗಮಿಸಿದರು. ಜನರು ಹೋದ ನಂತರ ತಾಪಂ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಸಂಜುಕುಮಾರ ನಂದಿ ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಬರುವ ವಿವರಗಳನ್ನು ಖಾಲಿ ಖುರ್ಚಿಗಳ ಎದುರು ಓದಿ ಕೈ ತೊಳೆದುಕೊಂಡರು.

ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭೂಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಪಿಡಿಒ ಸಂದೀಪ ಬಿರಾದಾರ, ಸದಸ್ಯರಾದ ಸಂತೋಷ ಗಾಯಕವಾಡ, ಜಗನ್ನಾಥ ದೇಟ್ನೆ, ವಿದ್ಯಾಸಾಗರ ಬನ್ಸೂಡೆ, ದೇವಿಂದ್ರ ಪವಾರ, ಯಾಸ್ಮಿನ್, ಚಂದ್ರಕಲಾ ಅದೆಪ್ಪ, ಪ್ರಮುಖರಾದ ರೂಪಾವತಿ ಜಾಧವ್, ಶಿವಾಜಿರಾವ ಜಾನಬಾ, ಭಾಗವತ ಜಾನಬಾ, ಸಿದ್ದು ಪಾರಶೆಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net