

ಸುಂಟಿಕೊಪ್ಪ: ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಕಿಟಕಿ ಗಾಜುಗಳನ್ನು ಒಡೆದು ಹಾಕಿ, ಕುಡಿಯುವ ನೀರಿನ ನಲ್ಲಿ ಧ್ವಂಸಗೊಳಿಸಿದ್ದಾರೆ.
70ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಳೆದ ವರ್ಷಗಳಿಂದ ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದ್ದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾತ್ರಿ ವೇಳೆ ಪುಂಡರು ಮದ್ಯಪಾನ ಮಾಡಿ ಖಾಲಿ ತೊಟ್ಟೆಗಳನ್ನು ಹಾಗೂ ಬೀಡಿ ಸಿಗರೇಟಿನ ತುಂಡನ್ನು ಶಾಲಾ ಆವರಣದಲ್ಲೇ ಎಸೆದು ಪುಂಡಾಟ ಮೆರೆಯುತ್ತಿರುವುದಲ್ಲದೆ, ಶಾಲೆಯ ಆವರಣದ ಕಿಟಕಿ ಗಾಜುಗಳನ್ನು, ಕುಡಿಯುವ ನೀರಿನ ನಲ್ಲಿಯನ್ನು ಒಡೆದು ವಿಕೃತ ಮನಸ್ಥಿತಿಯನ್ನು ತೋರ್ಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಶಾಲಾ ಮುಖ್ಯಶಿಕ್ಷಕರು ದೂರು ನೀಡಿದ್ದು, ಐಗೂರು ಗ್ರಾಮ ಪಂಚಾಯಿತಿ ವತಿಯಿಂದ ಮೂರು ಬಾರಿ ಕುಡಿಯುವ ನೀರಿನ ನಲ್ಲಿಯನ್ನು ದುರಸ್ತಿಪಡಿಸಲಾಗಿತ್ತು. ಪದೇ ಪದೆ ಪುಂಡಾಟ ಮೆರೆಯುವ ಈ ಪುಂಡ ಪೋಕರಿಗಳ ಅಟ್ಟಹಾಸವನ್ನು ಪೊಲೀಸರು ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಹಾಗೂ ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.