ಕಾಂಬೋಡಿಯಾ ಜತೆ ಭಾರತ ತಂಡದ ಎಂಒಯು

Sarvamangala
Published on

ಕಲಬುರಗಿ: ಉಬುಂಟು (ಯುಬಿಯುಎನ್‌ಟಿಯು) ಕನ್ಸೋರ್ಸಿಯಂ ಮತ್ತು ಸಿಡಬ್ಲೂಇಎ ಮಹಿಳಾ ಸದಸ್ಯರ ತಂಡ ಉದ್ಯಮಶೀಲತೆ ಮತ್ತು ವ್ಯಾಪಾರ ಅವಕಾಶ ವೃದ್ಧಿ ಹಿನ್ನೆಲೆಯಲ್ಲಿ ಕಾಂಬೋಡಿಯಾ ದೇಶಕ್ಕೆ ಇತ್ತೀಚಿಗೆ ಭೇಟಿ ನೀಡಿ ಮಾತುಕತೆ ನಡೆಸಿತು.
ಕನ್ಸೋರ್ಸಿಯಂ ಮುಖ್ಯಸ್ಥೆ, ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ನಾಯಕತ್ವದಲ್ಲಿ ಕಾಂಬೋಡಿಯಾ ಮಹಿಳಾ ಉದ್ಯಮಿಗಳ ಸಂಘದೊಂದಿಗೆ ಸಿಡಬ್ಲೂಇಎ ಕಾರ್ಯತಂತ್ರದ ಪಾಲುದಾರಿಕೆ ಘೋಷಿಸಲು ಒಪ್ಪಂದ ಮಾಡಿಕೊಂಡಿದೆ.
ಕಾಂಬೋಡಿಯಾ ಭೇಟಿ ಸಂದರ್ಭದಲ್ಲಿ ಸಹಿ ಹಾಕಲಾದ ಎಂಒಯು, ಮಹಿಳಾ ಉದ್ಯಮಿಗಳ ಸಬಲೀಕರಣ ಮತ್ತು ಗಡಿಯಾಚೆಗಿನ ಸಹಯೋಗ ವೃದ್ಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಬದ್ಧತೆ ಈ ಪಾಲುದಾರಿಕೆಯ ಆಶಯವಾಗಿದೆ.
ನಿಯೋಗದ ಮುಖ್ಯಸ್ಥೆ ರತ್ನಪ್ರಭಾ ಮಾತನಾಡಿ, ಸಹಯೋಗವು ರಫ್ತು, ವಿನಿಮಯ, ಉತ್ಪನ್ನ ಕೇಂದ್ರಿತ ಆನ್‌ಲೈನ್ ಸಭೆ, ಪರಸ್ಪರ ವ್ಯಾಪಾರ ಮತ್ತು ಹೂಡಿಕೆ ಉತ್ತೇಜಿಸುವುದು ಮತ್ತು ಸಾಂಸ್ಕೃತಿಕವಾಗಿ ವಿನಿಮಯ ಹೆಚ್ಚಿಸುವ ಗುರಿ ಹೊಂದಿದೆ. ಈ ಪಾಲುದಾರಿಕೆ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮೂಲಕ ನಮ್ಮ ಆರ್ಥಿಕ ಸಾಮರ್ಥ್ಯ ಬಲಪಡಿಸುವ ಗಮನಾರ್ಹ ಬದಲಾವಣೆ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕಾಂಬೋಡಿಯಾ ಕನ್ಸುಲೇಟ್ ಕಾರ್ತಿಕ್ ತಲಂ ಮತ್ತು ಹೆಡ್ ಆಫ್ ಪೊಲಿಟಿಕಲ್ ಅಂಡ್ ಎಕನಾಮಿಕಲ್ ಕನ್ಸುಲೇಟ್ ಎಶಿ ದರಿವಾಲ್ ಅವರು ಕರ್ನಾಟಕದಿಂದ ಉಬುಂಟು ಒಕ್ಕೂಟ ಮೂಲಕ ನಿಯೋಗ ಬಂದಿದ್ದ ೨೫ ಮಹಿಳಾ ಉದ್ಯಮಿಗಳನ್ನು ಸತ್ಕರಿಸಿದರು.
ಕಾಂಬೋಡಿಯಾಗೆ ಭೇಟಿ ನೀಡುವ ಮುನ್ನ ಮಹಿಳಾ ಉದ್ಯಮಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ನಿಯೋಗದ ಉz್ದÉÃಶ ವಿವರಿಸಿದರು. ಕಾಂಬೋಡಿಯಾ ಭೇಟಿ ಯಶಸ್ವಿಯಾಗಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.
ನಿಯೋಗದಲ್ಲಿ ಉಮಾರೆಡ್ಡಿ, ಕಲಬುರಗಿಯ ಎಕೊ ಶೈನ್ ಟೆಕ್ನಾಲಜೀಸ್ ಸಿಇಒ ಡಾ.ಸರ್ವಮಂಗಳ ಆರ್.ಪಾಟೀಲ್, ಏಕೊ ಕೇರ್ ಎಂಡಿ ಸುಜಾತಾ.ಎಸ್.ಪಾಟೀಲ್ ಮತ್ತು ರಿಜಾ ಫಾತಿಮಾ, ವಸಂತ ಕುಮಾರಿ, ರಚನಾ, ಅನುಷ್ಕಾ, ಉಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net