

ಹಾವೇರಿ: ಕಾಂಗ್ರೆಸ್ ಭೌತಿಕವಾಗಿ ದಿವಾಳಿಯಾಗಿದೆ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲೂ ನಾಲಾಯಕ್ ಆಗಿದೆ ಎಂದು ಬಿಜೆಪಿ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಕಾಂಗ್ರೆಸ್ಗೆ ಸಾರಥಿಗಳೇ ಇಲ್ಲದ ಸ್ಥಿತಿಯಿದೆ. ದೇಶದಲ್ಲಿ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿದ್ದರೆ, ರಾಜ್ಯದಲ್ಲಿ ಇನ್ನೂ ಅಧ್ಯಕ್ಷರ ನೇಮಕವಾಗಿಲ್ಲ. ಕಾಂಗ್ರೆಸ್ ಮುಕ್ತ ಭಾರತವಾಗುವ ನಮ್ಮ ರಾಷ್ಟ್ರಾಧ್ಯಕ್ಷರ ಸಂಕಲ್ಪವನ್ನು ಕಾರ್ಯಕರ್ತರು ಸಾಧಿಸಿದ್ದಾರೆ ಎಂದರು.
ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿದ್ದ ಕಾಂಗ್ರೆಸ್ ಬೇರೆಯಾಗಿತ್ತು. ವಂದೇ ಮಾತರಂ ಗೀತೆ ಕೇಳಿಬರುತ್ತಿತ್ತು. ಅಧಿಕಾರಕ್ಕೆ ಬಂದ ಮೇಲೆ ಪೂರ್ಣ ಬದಲಾಯಿತು. ಇದೀಗ ಮತ್ತೆ ಸಿಎಎ ಕಾಯ್ದೆ ಜಾರಿಯಾದ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಬದಲಾವಣೆಯಾಗಿದೆ. ವಂದೇ ಮಾತರಂ ಕೇಳಿ ಬರುತ್ತಿದೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ವಿರೋಧಿಸಿದವರ ಕೈಯಲ್ಲಿ ಈಗ ರಾಷ್ಟ್ರಧ್ವಜ ಬಂದಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಲು ದೆಹಲಿಯಲ್ಲಿ ಮುಖಂಡರೊಬ್ಬರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ಬೆಳಕಿಗೆ ಬಂದಿದೆ. ನಾವೆಲ್ಲ ಕೂಪ ಮಂಡೂಕಗಳಾಗದೇ ಸತ್ಯವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.
ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ನೂತನ ಅಧ್ಯಕ್ಷರು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವಂತೆ ಪಕ್ಷವನ್ನು ಕಟ್ಟಬೇಕು ಎಂದರು.
ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಪಕ್ಷದ ಹಿರಿಯರು, ಕಾರ್ಯಕರ್ತರ ಸಹಕಾರದೊಂದಿಗೆ ಮುಂದಿನ 3 ವರ್ಷಗಳ ಅವಧಿಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ಶ್ರಮಿಸುತ್ತೇನೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಮಹೇಶ ಟೆಂಗಿನಕಾಯಿ, ಡಿ.ಎಂ. ಸಾಲಿ ಇತರರಿದ್ದರು.
ನಳೀನ್ಕುಮಾರ್ ಕಟೀಲ್ ಅವರು, ತಮ್ಮ ಭಾಷಣದಲ್ಲಿ ಬಿ.ಸಿ. ಪಾಟೀಲರ ಹೆಸರು ಪ್ರಸ್ತಾಪಿಸಿದ ವೇಳೆ ಕಾರ್ಯಕರ್ತರು ಕೌರವ...ಕೌರವ ಎಂದು ಕೂಗಿದರು. ಆಗ ಕಟೀಲ್ ಅವರು ಪಾಟೀಲರು ಈಗ ಕೌರವ ಅಲ್ಲ. ಬಿಜೆಪಿ ಸೇರಿ ಅರ್ಜುನರಾಗಿದ್ದಾರೆ ಎಂದರು. ನಂತರ ಬಿ.ಸಿ. ಪಾಟೀಲ ವೇದಿಕೆಗೆ ಬಂದಾಗ ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ನ ಕೌರವವನ್ನು ತೊರೆದು ಇಲ್ಲಿಗೆ ಬಂದಿದ್ದೀರಿ ತಾನೆ ಎಂದು ಪ್ರಶ್ನಿಸಿದರು. ಆಗ ಬಿಸಿಪಿ ಹೌದು ಎಂದು ತಲೆಯಲ್ಲಾಡಿಸಿದರು.
ಕಟೀಲ್ ಅವರು ಅಧ್ಯಕ್ಷರಾದ ಮೇಲೆ ಎಂಬಿಬಿಎಸ್ ವಿದ್ಯಾರ್ಥಿಗಳಂತೆ ಶ್ರಮಪಡುತ್ತಿದ್ದಾರೆ. ಎಂಬಿಬಿಎಸ್ ಎಂದರೆ ಮನೆ ಬಿಟ್ಟು, ಬೂತ್ ಸುತ್ತು ಎಂದರ್ಥ. ನೂತನ ಜಿಲ್ಲಾಧ್ಯಕ್ಷರು ಎಂಬಿಬಿಎಸ್ ಕೋರ್ಸ್ ಮಾಡಬೇಕು. / ಶಿವಕುಮಾರ ಉದಾಸಿ, ಸಂಸದ