

ಅರಸೀಕೆರೆ: ನಗರೋತ್ಥಾನ ನಾಲ್ಕನೇ ಹಂತದ ಯೋಜನೆ ಅನುಷ್ಠಾನದ 30 ಕೋಟಿ ರೂ. ಅನುದಾನ ತಡೆಹಿಡಿಯುವ ಮೂಲಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಲು ಹೊರಟಿದೆ ಎಂದು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಬಸವರಾಜ ಬೊಮ್ಮಾಯಿ ಅಧಿಕಾರವಧಿ ವೇಳೆ ನಗರ ನಿವಾಸಿಗಳ ಮೂಲ ಸೌಕರ್ಯಕ್ಕೆ ದೊಡ್ಡ ಮೊತ್ತದ ಅನುದಾನ ನೀಡಿದ್ದರು. ಜಿಲ್ಲೆಯ ಬಹುತೇಕ ನಗರ ಹಾಗೂ ಪಟ್ಟಣಗಳಲ್ಲಿ ನಗರೋತ್ಥಾನ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಅರಸೀಕೆರೆ ನಗರದಲ್ಲಿ ಭೂಮಿಪೂಜೆ ನೆರವೇರಿಸಿ ನಾಲ್ಕು ತಿಂಗಳಾಗಿದ್ದರೂ ಕೆಲಸ ಮಾಡುತ್ತಿಲ್ಲ. ಈ ಸಂಬಂಧ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ವಿಚಾರಿಸಿದರೆ ಅನುದಾನ ತಡೆಹಿಡಿಯಲಾಗಿದೆ ಎನ್ನುವ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ರಸ್ತೆ, ಚರಂಡಿ, ವಿದ್ಯುದ್ದೀಪ ಸೇರಿ ಎಲ್ಲ ಬಗೆಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು, ನಾಗರಿಕರಿಗೆ ಉತ್ತರಿಸಲಾಗದ ಸನ್ನಿವೇಶ ನಿರ್ಮಾಣಗೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸದನದಲ್ಲಿ ಕಾಯಿ, ಕೊಬ್ಬರಿ, ಕ್ರಷರ್ ವಿಚಾರಕ್ಕೆ ಟೇಬಲ್ ಗುದ್ದುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಅನುದಾನ ಸ್ಥಗಿತದ ಕುರಿತು ಏಕೆ ಮಾತನಾಡುತ್ತಿಲ್ಲ. ವಾಸ್ತವ ಮನಗಂಡು ತಡೆ ಹಿಡಿದಿರುವ ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನಿವಾಸದ ಎದುರು ಧರಣಿ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಗರಸಭೆ ಸದಸ್ಯರಾದ ಮೇಲುಗಿರಿಗೌಡ, ಈಶಣ್ಣ, ಝಾಕೀರ್, ಭಾಸ್ಕರ್, ಮುಖಂಡರಾದ ಸಿಕಂದರ್, ಹರ್ಷವರ್ಧನ್ ರಾಜ್ ಇತರರು ಹಾಜರಿದ್ದರು.