ಕಾಂಗ್ರೆಸ್‌ನಿಂದ ಗ್ರಾಪಂ ಸದಸ್ಯರ ಅಪಹರಣ

ZP Shivaraj Raddevadagi
Published on

ಕಲಬುರಗಿ: ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಪಂ ಸದಸ್ಯರು ಮಹಾರಾಷ್ಟ ಪ್ರವಾಸಕ್ಕೆ ಹೋಗಿದ್ದಾಗ ಕಾಂಗ್ರೆಸ್‌ನವರು ಅಪಹರಿಸಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಆರೋಪಿಸಿದರು.
ಬಿಜೆಪಿಯವರಲ್ಲಿ ಭಯ ಹುಟ್ಟಿಸುವ ದುರುದ್ದೇಶದಿಂದಲೇ ಇಂತಹ ಕೃತ್ಯ ಮಾಡುತ್ತಿದ್ದಾರೆ. ಕೆಲದಿನ ಹಿಂದೆ ಕಲಬುರಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದಲ್ಲೂ ಕಿಡ್ನಾಪ್ ಮಾಡಲು ಯತ್ನಿಸಲಾಗಿತ್ತು ಎಂದು ಅವರು ಭಾನುವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ದೂರಿದರು.
ಚುನಾವಣೆ ಹಿನ್ನೆಲೆಯಲ್ಲಿ ಐನೋಳ್ಳಿ ಗ್ರಾಪಂ ಸದಸ್ಯರು ಪುಣೆಗೆ ಪ್ರವಾಸ ಹೋಗಿದ್ದರು. ಹೋಟೆಲ್‌ನಲ್ಲಿದ್ದಾಗ ದಾಳಿ ಮಾಡಿ ಚಾಕು ತೋರಿಸಿ ಕಾಂಗ್ರೆಸಿಗರು ಅಪಹರಿಸಿದ್ದಾರೆ. ಇದನ್ನು ನೋಡಿದರೆ ಚಿಂಚೋಳಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟ. ಆಡಳಿತ ನಡೆಸುವ ಸರ್ಕಾರ ಇಂಥದ್ದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ಹೋಟೆಲ್ ಕೋಣೆಗೆ ನುಗ್ಗಿ ಮಹಿಳೆಯರು ಮತ್ತು ಪುರುಷ ಸದಸ್ಯರನ್ನು ಬೆದರಿಸಿ, ಚಾಕು ಹಚ್ಚಿ ಎಳೆದೊಯ್ದು ಕ್ರೌರ್ಯ ಮೆರೆದಿದ್ದಾರೆ. ಈ ಕೂಡಲೇ ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರದ್ದೇವಾಡಗಿ ಆಗ್ರಹಿಸಿದರು.
ಅಪಹರಣದಿಂದಾಗಿ ಸೋಮವಾರ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಗ್ರಾಪಂ ಸದಸ್ಯರು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ಗ್ರಾಪಂ ಸದಸ್ಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಗೌತಮ ಪಾಟೀಲ್, ಭವಾನಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net