ಕಾಂಗ್ರೆಸ್ ಸರ್ಕಾರದಿಂದ ಜನ ವಿರೋಧಿ ನೀತಿ

bkt-14-1
ಬಾಗಲಕೋಟೆ ನಗರದ ಪ್ರೇಸ್‌ಕ್ಲಬ್‌ನಲ್ಲಿ ಬಿಜೆಪಿ ರೈತ ಮೋರ್ಚಾ ಮುಖಂಡರು ಮಾತನಾಡಿದರು.
Published on

ಬಾಗಲಕೋಟೆ: ರಾಜ್ಯದಲ್ಲಿ ಅಽಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ತಂದಿರುವ ಜನಪರ ಯೋಜನೆ, ಕಾಯ್ದೆಗಳನ್ನು ತೆಗೆದು ಹಾಕಲು ಮುಂದಾಗಿದೆ. ಇದು ಜನ ವಿರೋಧಿ ನೀತಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಸಂಜಯ ಪಾಟೀಲ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ, ಎಪಿಎಂಸಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒತ್ತು ನೀಡಿತ್ತು. ಜನರ ಬೇಡಿಕೆ ಅನ್ವಯ ಕಾಯ್ದೆ, ಕಾನೂನು, ಯೋಜನೆ ಜಾರಿಗೊಳಿಸಿತ್ತು. ಇದೀಗ ಅವುಗಳನ್ನು ತೆಗೆದುಹಾಕಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ. ಬಿಜೆಪಿ ಈ ಬಗ್ಗೆ ಹೋರಾಟ ನಡೆಸಲಿದೆ ಎಂದರು.

ರೈತರು ಮುಕ್ತವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆದರೇ ಅದನ್ನು ರದ್ದುಗೊಳಿಸಲಾಗುತ್ತಿದೆ. ವಿದ್ಯುತ್ ದರ ಹೆಚ್ಚಳ ಮಾಡಿ ಅನ್ಯಾಯ ಮಾಡುತ್ತಿದೆ. ರೈತ ವಿದ್ಯಾನಿಧಿ ಯೋಜನೆ ರದ್ದು ಮಾಡಲು ಆಲೋಚನೆ ಮಾಡಿದೆ. ಜಿಲ್ಲೆಗೊಂದು ಗೋಶಾಲೆ ರದ್ದು ಪಡಿಸಿ ಅಕ್ರಮ ಗೋ ಸಾಗಾಣಿಕೆಗೆ ಪ್ರೋತ್ಸಾಹ ನೀಡಲು ಯೋಚಿಸಿದೆ. ರಾಜ್ಯದ ೫೦ ಲಕ್ಷ ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂ ಸಿರಿ ಯೋಜನೆ ಮೂಲಕ ೧೦ ಸಾವಿರ ರೂ. ಹೆಚ್ಚುವರಿ ಸಹಾಯಧನ ನೀಡಲು ನಮ್ಮ ಸರ್ಕಾರ ನಿರ್ಣಯಗೊಂಡಿತ್ತು. ಅದನ್ನು ಕೂಡಾ ರದ್ದು ಪಡಿಸಲಾಗುತ್ತಿದೆ ಎಂದು ದೂರಿದರು.

ಇನ್ನು ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ ನಮ್ಮ ಸರ್ಕಾರ ೪ ಸಾವಿರ ರೂ. ವಾರ್ಷಿಕ ಎರಡು ಕಂತುಗಳಲ್ಲಿ ನೀಡಲಾಗುತ್ತಿತ್ತು. ಇದೀಗ ಅದನ್ನು ನಿಲ್ಲಿಸಲಾಗುತ್ತಿದೆ. ರೈತ ಶಕ್ತಿ ಯೋಜನೆ ರದ್ದುಗೊಳಿಸಲಾಗುತ್ತಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ ಮಹತ್ತರ ಬದಲಾವಣೆ ತಂದು ಮುಕ್ತಗೊಳಿಸಲಾಗಿತ್ತು. ಅದನ್ನು ಕೂಡಾ ರದ್ದು ಪಡಿಸಲಾಗುತ್ತಿದೆ. ನಮ್ಮ ಸರ್ಕಾರ ನೀರಾವರಿಗೆ ೨೩ ಸಾವಿರ ಕೋಟಿ ರೂ., ಅನುದಾನ ಒದಗಿಸಿತ್ತು, ಕಾಂಗ್ರೆಸ್ ಅದನ್ನು ೧೯ ಸಾವಿರ ಕೋಟಿ ರೂ. ಇಳಿಸಿದೆ ಎಂದು ಹೇಳಿದರು.

ಮುಖಂಡರಾದ ಬಸವರಾಜ ಮಳಲಿ, ರಾಜು ರೇವಣಕರ, ರಾಜು ನಾಯ್ಕರ, ರಾಮಣ್ಣ ಹೆರಕಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net