ಕಾಂಗ್ರೆಸ್ ಸರ್ಕಾರದ ವಿರುದ್ಧ ಬಂಡೇಳಿ

bkt-1-11
ಬಾಗಲಕೋಟೆ ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ ಮಾತನಾಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತಿತರರು ಇದ್ದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಬೇಕೆಂದು ಕಳೆದ ಆರು ದಶಕಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೃಷ್ಣಾ ತೀರದ ರೈತರಿಗೆ ಈಗಿನ ಕಾಂಗ್ರೆಸ್ ಸರ್ಕಾರ ಮಹಾದ್ರೋಹ ಮಾಡಲು ಮುಂದಾಗಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು ೫೨೪.೨೫೬ ಮೀಟರ್ ಗೆ ಬದಲಾಗಿ ಅದನ್ನು ೫೨೨ ಮೀಟರ್ ಗೆ ನಿಲ್ಲಿಸಲು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲು ಸಿದ್ದತೆ ಮಾಡಿಕೊಂಡಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಬಂಡೇಳಬೇಕು ಎಂದು ಕೃಷ್ಣಾ ತೀರದ ರೈತರು ಹಾಗೂ ಮುಳಗಡೆ ಸಂತ್ರಸ್ತರಿಗೆ ಮಾಜಿ ಜಲಸಂಪನ್ಮೂಲ ಸಚಿವ, ಹಾಲಿ ಸಂಸದ ಗೋವಿಂದ ಕಾರಜೋಳ ಕರೆ ನೀಡಿದರು.

ಬಾಗಲಕೋಟೆಯಲ್ಲಿ ಭಾನುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ಕಾರಜೋಳ, ಕೃಷ್ಣಾ ನ್ಯಾಯಾಧೀಕರಣ-೨ರಲ್ಲಿ ನಮಗೆ ಈಗ ಇರುವ ನೀರಿನ ಜೊತೆಗೆ ೧೩೦ ಟಿಎಂಸಿ ನೀರು ಸಂಗ್ರಹಿಸಲು ಅವಕಾಶ ಇದೆ. ಆದರೆ, ಕಾಂಗ್ರೆಸ್ ಸರ್ಕಾರ ಜಲಾಶಯ ಮಟ್ಟ ಎತ್ತರಿಸುವ ಮುನ್ನ ಭೂಸ್ವಾಧೀನ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ಕೊಡಬೇಕಿತ್ತು. ಆದರೆ, ಆ ಬಗ್ಗೆ ಗಮನ ಹರಿಸದೇ ಇದೀಗ ಜಲಾಶಯ ಮಟ್ಟವನ್ನು ಎತ್ತಿರುಸುವ ಹಂತವನ್ನೆ ಕಡಿಮೆ ಮಾಡಲು ಮುಂದಾಗಿದೆ. ಇದು ಬರೀ ನಮಗೆ ಮಾತ್ರವಲ್ಲ. ಉತ್ತರ ಕರ್ನಾಟಕರ ಮುಂದಿನ ಪೀಳಿಗೆಗೂ ಮಾಡುವ ಮಹಾದ್ರೋಹವಾಗಿದೆ. ಇದರ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಇವತ್ತು ಮುಳುಗಡೆ ಸಂತ್ರಸ್ತರು ಯೋಜನೆ ಪೂರ್ಣಗೊಳಿಸಿ ಎಂದು ಬೀದಿಗೆ ಬಂದು ಹೋರಾಟಕ್ಕೆ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದರೆ ಇದು ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುತ್ತದೆ. ನೀರಾವರಿ ಯೋಜನೆಗಾಗಿ ತಮ್ಮೆಲ್ಲ ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ತರಾಗುವ ಜನರಿಗೆ ಬದುಕು ಕಟ್ಟಿಕೊಡಬೇಕಾದ ಕರ್ತವ್ಯ ಸರ್ಕಾರದ್ದು. ಅದರಲ್ಲಿ ವಿಫಲವಾಗಿ ಇದೀಗ ರೈತರು ಡಿ.೩ ರಿಂದ ಅನಿಽðಷ್ಟ ಹೋರಾಟಕ್ಕೆ ಇಳಿದು ಬೀದಿಗೆ ಬಂದು ನಿಲ್ಲುತ್ತಾರೆ ಎಂದರೆ ಇದು ನಾಗರಿಕ ಸರ್ಕಾರವೇ ಎಂದು ಖಾರವಾಗಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಮಾಜಿ ಸದಸ್ಯ ಯಲ್ಲಪ್ಪ ಬೆಂಡಿಗೇರಿ, ಬಿಟಿಡಿಎ ಮಾಜಿ ಸದಸ್ಯ ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ಕಿರಣ ಕೋಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net