

ಕಲಬುರಗಿ: ರಾಜ್ಯದಲ್ಲಿ ಬೀದಿ ಬೀದಿಯಲ್ಲಿ ಮಹಿಳೆಯರ ಹತ್ಯೆ, ಬೆತ್ತಲೆ ಮೆರವಣಿಗೆ, ಅತ್ಯಾಚಾರ ಆಗುತ್ತಿವೆ. ಆದರೆ ಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ರೀತಿ ವರ್ತಿಸಿ ಅಪರಾಧಗಳನ್ನು ಮಾಡುತ್ತಿರುವ ಜಿಹಾದಿಗಳ ಬೆಂಬಲಕ್ಕೆ ನಿಲ್ಲುತ್ತ ತನ್ನ ಪಾಪದ ಕೊಡವನ್ನು ತುಂಬಿಕೊಂಡಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕಿ ಸುಧಾ ಹಾಲಕಾಯಿ ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರದ ೧೦ ತಿಂಗಳಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕೈಮೀರಿದ್ದು, ರಾಜ್ಯದಲ್ಲಿ ಶೇ.೫೦ ಮಹಿಳಾ ದೌರ್ಜನ್ಯ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಲಾಗುತ್ತದೆ. ಇದೀಗ ನೇಹಾ ಹಿರೇಮಠಳನ್ನು ಬೀದಿಯಲ್ಲಿ ಕೊಲೆಗೈದಿದ್ದು, ರಾಜ್ಯದ ಸ್ಥಿತಿ ಅದೋಗತಿಯತ್ತ ಸಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಪಾಕಿಸ್ತಾನ ಜಿಂದಾಬಾದ್ ಎಂದಾಗ ಕಾಂಗ್ರೆಸ್ ಮುಖಂಡ ಪಾಕಿಸ್ತಾನ ಶತ್ರುರಾಷ್ಟçವಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ, ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣ ಗ್ಯಾಸ್ ಸ್ಟೋ ಎಂದು ಸಿಎಂ, ಡಿಸಿಎಂ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ, ರಾಮನ ಹಾಡು ಹಾಕಿದ್ದಕ್ಕೆ ಜಿಹಾದಿಗಳಿಂದ ಹಲ್ಲೆ ನಡೆಯುತ್ತೆ, ಕೊಡಗಿನಲ್ಲಿ ಬಿಜೆಪಿಯ ಕಾರ್ಯಕರ್ತನನ್ನು ಅಪಘಾತದಲ್ಲಿ ಸಿಲುಕಿಸಿ ಕೊಲೆಗೈಯಲಾಗುತ್ತೆ, ಮೋದಿ ಹಾಡು ಬರೆದಿದ್ದಕ್ಕೆ ಹಲ್ಲೆ, ರಾಮನವಮಿಯಿಂದ ಬೆಂಗಳೂರಿನಲ್ಲಿ ಹಲ್ಲೆ, ನಟಿ ಹರ್ಷಿತಾಗೆ ಕನ್ನಡ ಮಾತಾಡಬೇಡ ಎಂದು ಪ್ರಶ್ನೆ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇರಳದಲ್ಲಿ ಲವ್ ಜಿಹಾದ್ ನಡೆದರೆ ಅಲ್ಲಿನ ಸಿಎಂ ಬಹಿರಂಗವಾಗಿ ಲವ್ ಜಿಹಾದ್ ಆಗಿದೆ ಎಂದು ಒಪ್ಪಿಕೊಳ್ಳುತ್ತಾರೆ. ಕೇರಳದಲ್ಲಿ ಲವ್ ಜಿಹಾದ್ ಆಗುತ್ತಿದ್ದು, ಅದರ ಮೇಲೆ ಸಿನೆಮಾವೇ ಬಿಡುಗಡೆ ಆಗಿದೆ. ಅದೇ ಸ್ಥಿತಿ ಕರ್ನಾಟಕದಲ್ಲೂ ಬರಬಾರದು ಎಂದರೆ ರಾಜ್ಯ ಸರ್ಕಾರ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಖಾಲಿ ಕೊಡದ ಮೇಲೆ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ಎಂದು ಸ್ಟಿಕ್ಕರ್ ಅಂಟಿಸಿ ಪತ್ರಿಕಾಗೋಷ್ಠಿಗೆ ಆಗಮಿಸಿ, ಗಮನ ಸೆಳೆದರು.