ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ ಶ್ರೀಗಳ ಶಾಪ - ಸಿದ್ದನಕೊಳ್ಳ ಗಂಗಾಧರ ಸ್ವಾಮೀಜಿ

01
Published on

ಬೆಳಗಾವಿ: ಶಿವಾಪುರದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿಗಳ ಕಾರು ಅಪಘಾತದಲ್ಲಿ ಮೃತರಾಗಿದ್ದ ಇಬ್ಬರು ಭಕ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದ್ದು, ಮಠಾಧೀಶರ ಕಡೆಗಣನೆ ಮುಂದುವರಿದರೆ ಶಾಪ ತಟ್ಟಿ, ಸರ್ಕಾರ ಪತನವಾಗುತ್ತದೆ ಎಂದು ಸಿದ್ದನಕೊಳ್ಳ ಮಠದ ಗಂಗಾಧರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.17ರಂದು ದುರಂತ ಸಂಭವಿಸಿದ್ದರೂ ಈವರೆಗೂ ಪರಿಹಾರ ಕಲ್ಪಿಸಿಲ್ಲ. ಬೇರೆಯವರು ತೀರಿಕೊಂಡಾಗ 20 ಲಕ್ಷ ರೂ. ಪರಿಹಾರ ನೀಡುತ್ತಾರೆ. ನಮ್ಮ ಭಕ್ತರಿಗೆ ಎಷ್ಟು ಪರಿಹಾರ ನೀಡಬೇಕೆಂದು ಸರ್ಕಾರವೇ ನಿರ್ಧರಿಸಲಿ. ಇನ್ನು ಸರ್ಕಾರದ ವರ್ತನೆ ನೋಡಿದರೆ ಸ್ವಾಮೀಜಿಗಳ ವಿರೋಧಿಯಂತೆ ಕಾಣಿಸುತ್ತಿದೆ ಎಂದು ಹರಿಹಾಯ್ದರು. ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ನಾಡಿನ ದೊಡ್ಡ ದೊಡ್ಡ ಮಠಾಧೀಶರು, ತಪ್ಪು ದಾರಿಯಲ್ಲಿ ನಡೆಯುತ್ತಿರುವ ಸರ್ಕಾರದ ಕಿವಿ ಹಿಂಡಿ, ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯ ರುದ್ರಕೇಸರಿ ಮಠದ ಹರಿಗುರು ಮಹಾರಾಜರು ಮಾತನಾಡಿ, ಮೃತರ ಕುಟುಂಬಗಳಿಗೆ ಪರಿಹಾರ ನೀಡುವಂತೆ 20ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದೇವೆ. ಇಂದು ಕೊನೆಯ ಮನವಿ ಸಲ್ಲಿಸುತ್ತಿದ್ದು, ಮುಂದೆ ಸ್ವಾಮೀಜಿಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ವಾಮೀಜಿಗಳು, ಕಾರು ಅಪಘಾತದಲ್ಲಿ ಹುಕ್ಕೇರಿ ತಾಲೂಕಿನ ಪರಖನಟ್ಟಿ ಗ್ರಾಮದ ಪಂಚಾಕ್ಷರಿ ಹಿರೇಮಠ ಮತ್ತು ನಿಪ್ಪಾಣಿ ಬಳಿಯ ಬಾಚಣಿಯ ಪಾಂಡುರಂಗ ಜಾಧವ ಅವರ ಕುಟುಂಬದವರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net