

ಹಳಿಯಾಳ: ತಾಲೂಕಿನ 13 ಸೇವಾ ಸಹಕಾರಿ ಸಂಘಗಳ ಪೈಕಿ 11 ಸಂಘಗಳ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ಹೆಚ್ಚು ಸ್ಥಾನಗಳು ಒಲಿದಿವೆ. ಆರು ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹುಮತ ಗಳಿಸಿದ್ದಾರೆ. ಇತ್ತ ಬಿಜೆಪಿಯು 2 ಸಹಕಾರಿ ಸಂಘಗಳಲ್ಲಿ ಬಹುಮತ ಗಳಿಸಿದ್ದರೆ, ಮೂರು ಸಂಘಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಸಮಾನವಾಗಿ ಆಯ್ಕೆಯಾಗಿದ್ದಾರೆ.
ಹಳಿಯಾಳ ವಿಧಾನಸಭೆ ಕ್ಷೇತ್ರದ ಮಟ್ಟಿಗೆ ಮಿನಿ ವಿಧಾನಸಭೆ ಚುನಾವಣೆಯೆಂದೇ ಬಿಂಬಿತವಾಗಿ ಭಾರಿ ಜಿದ್ದಾಜಿದ್ದಿಯಿಂದ ನಡೆಯಿತು. ಪಕ್ಷದ ಚಿಹ್ನೆಯಡಿ ಸಹಕಾರಿ ಸಂಘಗಳ ಚುನಾವಣೆ ನಡೆಯದಿದ್ದರೂ, ಪರೋಕ್ಷವಾಗಿ ರಾಜಕೀಯ ಪಕ್ಷಗಳ ಬೆಂಬಲದಿಂದಲೇ ಚುನಾವಣೆ ನಡೆಯುವುದು ವಾಡಿಕೆಯಾಗಿದೆ.
ಸಹಕಾರಿ ಕಾಯ್ದೆ 1959ರ ಅನುಷ್ಠಾನದಿಂದ ಸಾಕಷ್ಟು ಷೇರುದಾರ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದರು. ಇದನ್ನೇ ಚುನಾವಣೆ ಅಸ್ತ್ರವನ್ನಾಗಿ ಬಳಸಿದ ಮಾಜಿ ಶಾಸಕ ಸುನೀಲ ಹೆಗಡೆ ಅವರ ನೇತೃತ್ವದಲ್ಲಿ ಬಿಜೆಪಿಯೂ ಉತ್ತಮ ಸ್ಪರ್ಧೆಯೊಡ್ಡಿತು.
ಕಾಂಗ್ರೆಸ್ ಬೆಂಬಲಿಗರು ತೇರಗಾಂವ, ನಾಗಶೆಟ್ಟಿಕೊಪ್ಪ, ಆಲೂರ, ಬಿ.ಕೆ. ಹಳ್ಳಿ, ಕಾವಲವಾಡ, ಹಳಿಯಾಳ ಸಹಕಾರಿ ಸಂಘದಲ್ಲಿ ಬಹುಮತ ಗಳಿಸಿದ್ದಾರೆ, ಬಿಜೆಪಿಯು ಬೆಳವಟಗಿ, ಯಡೋಗಾ ಸಂಘದಲ್ಲಿ ಬಹುಮತ ಗಳಿಸಿದ್ದರೆ, ಗುಂಡೊಳ್ಳಿ, ಮಂಗಳವಾಡ ಹಾಗೂ ಮದ್ನಳ್ಳಿಯ ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಬೆಂಬಲಿತರು ಸಮನಾಗಿ ಗೆದ್ದಿದ್ದರಿಂದ ಫಲಿತಾಂಶ ಟೈ ಆಗಿದೆ.
ಫಲಿತಾಂಶ
ಕಾಮಧೇನು ಸೇವಾ ಸಹಕಾರಿ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರು 9 ಹಾಗೂ ಬಿಜೆಪಿ 2 ಸ್ಥಾನ.
ನಾಗಶೆಟ್ಟಿಕೊಪ್ಪ ಎಸ್.ಎಸ್ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರು 9 ಹಾಗೂ ಬಿಜೆಪಿ 3.
ಕಲ್ಪತರು ಎಸ್.ಎಸ್ ಸಂಘ ಬಿ.ಕೆ.ಹಳ್ಳಿಯಲ್ಲಿ ಕಾಂಗ್ರೆಸ್ 10, ಬಿಜೆಪಿ 2.
ಸೋಮಶ್ವೇರ ಎಸ್.ಎಸ್ ಸಂಘ ಕಾವಲವಾಡದಲ್ಲಿ ಕಾಂಗ್ರೆಸ್ ಬೆಂಬಲಿಗರು 9, ಬಿಜೆಪಿ 2.
ದಾಂಡೇಲೆಪ್ಪ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಬೆಂಬಲಿಗರು 11 ಹಾಗೂ ಬಿಜೆಪಿ 1.
ಬಸವೇಶ್ವರ ಎಸ್.ಎಸ್. ಸಂಘದಲ್ಲಿ ಬೆಳವಟಗಿ ಬಿಜೆಪಿಯ ಬೆಂಬಲಿತರಿಗೆ ಎಲ್ಲ 12 ಸ್ಥಾನಗಳಲ್ಲಿ ಜಯ.
ಬಿದ್ರೋಳ್ಳಿ ಎಸ್.ಎಸ್. ಸಂಘ ಯಡೋಗಾ ಬಿಜೆಪಿ ಬೆಂಬಲಿತರು 7, ಕಾಂಗ್ರೆಸ್ ಬೆಂಬಲಿಗರು 5.
ಮಂಗಳವಾಡ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ.
ಮದ್ನಳ್ಳಿ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ.
ಗುಂಡೊಳ್ಳಿಯ ಎಸ್.ಎಸ್. ಸಂಘದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ತಲಾ 6 ಸ್ಥಾನ.
ಘೊಟ್ನೇಕರ ಪ್ರಭಾವ
ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆ ಹಾಗೂ ಚುನಾವಣೆಗಳ ಮೇಲೆ ಸದಾ ನಿಗಾ ವಹಿಸುತ್ತಿದ್ದ ಶಾಸಕ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಆಸಕ್ತಿ ತೋರಿಲ್ಲ. ಈ ಬಾರಿಯ ಸಂಘಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಬದಲಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಘೊಟ್ನೇಕರ ಬೆಂಬಲಿಗರೇ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ತಮ್ಮ ಬೆಂಬಲಿಗರ ಪಡೆಯೊಂದಿಗೆ ಏಕಾಂಗಿ ಪ್ರಚಾರ ನಡೆಸಿದ ಘೊಟ್ನೇಕರ ತಾವು ಗೆಲ್ಲುವುದರೊಂದಿಗೆ ತಮ್ಮ ಬೆಂಬಲಿಗರನ್ನೂ ಗೆಲ್ಲಿಸಿ ತನ್ನ ಪ್ರಾಬಲ್ಯ ಹೆಚ್ಚಿಸಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೈತ ಸೇವಾ ಸಹಕಾರಿ ಸಂಘ
ಈ ಬಾರಿ ಗಮನ ಸೆಳೆದ ಪಟ್ಟಣದ ರೈತ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿಗರು ಗೆದ್ದು ಕ್ಲೀನ್ ಸ್ವೀಪ್ ಮಾಡಿದ್ದಾರೆ. ಎಸ್.ಎಲ್. ಘೊಟ್ನೆಕರ, ಶಿವಪುತ್ರಪ್ಪ ನುಚ್ಚಂಬ್ಲಿ, ಲತಿಫಶಾ ಕರೀಮಷಾ ಲತೀಫನವರ, ರೇಷ್ಮಾ ಮಾರುತಿ ಪಾಟೀಲ, ಬಾಲಕೃಷ್ಣ ಪರಶುರಾಮ ಶಹಾಪೂರಕರ, ಮಂಜುನಾಥ ಶಿವಾಜಿ ಬಂಡಿವಾಡ, ಬಸವರಾಜ ಬಸವಣ್ಣೆಪ್ಪ ಮಡ್ಡಿ, ಮನೋಹರ ಈಶ್ವರ ಅಂಗ್ರೋಳ್ಳಿ, ಸಹದೇವ ಯಲ್ಲಪ್ಪ ಮಡಿವಾಳ, ಸಂಜು ಓಮಣ್ಣ ಗೌಡಾ (ಪಾಟೀಲ), ರುಕ್ಮಾ ಮಹಾಬಳೇಶ್ವರ ಭಾಗ್ವತಕರ, ವಿಶಾಲ ಶಿವಾಜಿ ಘೊಟ್ನೆಕರ ಇಲ್ಲಿ ಆಯ್ಕೆಯಾಗಿದ್ದಾರೆ.
ಬಿಜೆಪಿಗೆ ಭರ್ಜರಿ ಗೆಲುವು
ಹಳಿಯಾಳ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದಿದೆ.
ಆಡಳಿತ ಮಂಡಳಿಯ 12 ಸ್ಥಾನಗಳಲ್ಲಿ 9 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನ್ನುಳಿದ 3 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಫಲಿತಾಂಶ: ನಾಗಶೆಟ್ಟಿಕೊಪ್ಪ ಕ್ಷೇತ್ರಕ್ಕೆ ಪರಶುರಾಮ ಶಂಕರ ರಾಠೋಳಿ, ಬಿ.ಕೆ. ಹಳ್ಳಿ ಕ್ಷೇತ್ರದಲ್ಲಿ ಶಿವಾಜಿ ಚಂದ್ರು ಪಾಟೀಲ ಹಾಗೂ ಮುರ್ಕವಾಡ ಕ್ಷೇತ್ರದಲ್ಲಿ ಮೋಹನ ದೇಮಣ್ಣ ಗೌಡಾ ವಿಜೇತರಾಗಿದ್ದಾರೆ. ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ನದು ಅಕ್ರಮ ಗೆಲುವು
ಹಳಿಯಾಳ ತಾಲೂಕಿನ ಸೇವಾ ಸಹಕಾರಿ ಸಂಘಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ್ದು ಅಕ್ರಮ ಗೆಲುವಾಗಿದೆ. ಇದು ಮತದಾರರು ನೀಡಿದ ಜನಾದೇಶವಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷದವರು ಅಧಿಕಾರ ದುರ್ಬಳಕೆ ಮಾಡಿ ತಮಗೆ ಬೇಕಾದಂತೆ ಪಡೆದ ಫಲಿತಾಂಶವಿದು ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಎಲ್ಲೆಡೆ ಅವಿರೋಧವಾಗಿ ಆಯ್ಕೆಯಾಗಬೇಕೆಂಬ ಕಾಂಗ್ರೆಸ್ನವರ ಯೋಜನೆಗೆ ಬಿಜೆಪಿ ತಕ್ಕ ಉತ್ತರ ನೀಡಿದೆ ಎಂದರು.
ಮತದಾನದ ಹಕ್ಕಿನಿಂದ ವಂಚಿತರಾದವರಿಗೆ ಮತದಾನದ ಹಕ್ಕನ್ನು ನೀಡಿದ ತೃಪ್ತಿ ನಮ್ಮ ಪಕ್ಷಕ್ಕಿದೆ. ಪಟ್ಟಣದ ರೈತ ಸೇವಾ ಸಹಕಾರಿ ಸಂಘದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಸಂಘದ ಷೇರುದಾರರು ಸಲ್ಲಿಸಿದ ದೂರಿನಡಿ ಲೆಕ್ಕಪತ್ರಗಳ ತನಿಖೆಗೆ ರಾಜ್ಯ ಸರ್ಕಾರ ಆದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಶಿವಾಜಿ ನರಸಾನಿ, ಅನಿಲ ಮುತ್ನಾಳ, ಮೋಹನ ಬೆಳಗಾಂವಕರ, ವಿಲಾಸ ಯಡವಿ, ತುಕಾರಾಮ ಪಟ್ಟೇಕರ, ಚೂಡಪ್ಪ ಬೊಬಾಟೆ, ನಾರಾಯಣ ಬೆಳಗಾಂವಕರ ಇದ್ದರು.