ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇನ್ನಷ್ಟು ಬಲ

2SIRSI5
Published on

ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ, ಪ್ರತಿಜ್ಞಾ ವಿಧಿ ಸಮಾರಂಭವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು ವೀಕ್ಷಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಎಲ್ಲ 14 ಬ್ಲಾಕ್​ಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದ 224 ಸ್ಥಳಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಕೇಂದ್ರದಲ್ಲಿ 30ರಿಂದ 50ರಷ್ಟು ಜನ ವೀಕ್ಷಿಸಿದ್ದಾರೆ. ಕೋವಿಡ್-19 ಇರುವ ಕಾರಣಕ್ಕೆ ಪರಸ್ಪರ ಅಂತರ, ಮುಖಗವಸು, ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿತ್ತು ಎಂದರು. ಎಲ್ಲ 11 ತಾಲೂಕುಗಳ ನಗರ, ಪಟ್ಟಣ ಪ್ರದೇಶಗಳ 112 ಕಡೆಗಳಲ್ಲಿ ಕಾರ್ಯಕ್ರಮ ನಡೆದಿದೆ. ಗಣೇಶನಗರ, ಮರಾಠಿಕೊಪ್ಪ, ವಿವೇಕಾನಂದ ನಗರ, ಕಸ್ತೂರಬಾ ನಗರ, ರಾಮನಬೈಲ್, ರಾಯರಪೇಟೆ, ಖಾಜಿಗಲ್ಲಿ, ಗಾಂಧಿನಗರ ಮೊದಲಾದ 16 ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆಗೊಳಿಸಲಾಗಿತ್ತು. ಈ ಕಾರ್ಯಕ್ರಮವು ಪಕ್ಷದ ಸಂಘಟನೆಗೆ ಇನ್ನಷ್ಟು ಬಲ ನೀಡುವುದು ನಿಶ್ಚಿತ ಎಂದರು.

ಕೆಪಿಸಿಸಿ ಜಿಲ್ಲಾ ಉಸ್ತುವಾರಿ ವಿ.ಎಸ್.ಆರಾಧ್ಯ, ಬ್ಲಾಕ್ ಅಧ್ಯಕ್ಷ ಜಗದೀಶ ಗೌಡ, ಮಾಜಿ ಅಧ್ಯಕ್ಷ ರಮೇಶ ದುಭಾಶಿ, ಸೇವಾದಳದ ಜಿಲ್ಲಾ ಸಂಚಾಲಕ ಆರ್.ಎಚ್.ನಾಯ್ಕ, ಕಾರ್ಯದರ್ಶಿ ಸತೀಶ ನಾಯ್ಕ, ಮಾಧವ ರೇವಣಕರ್, ಕೆಪಿಸಿಸಿ ವೀಕ್ಷಕಿ ಸುಷ್ಮಾ ರಾಜಗೋಪಾಲ್, ತಾರಾ ನಾಯ್ಕ, ಯುವ ಕಾಂಗ್ರೆಸ್​ನ ಪ್ರಸನ್ನ ಶೆಟ್ಟಿ, ಜಬೀಯುಲ್ಲಾ, ನಾಗರಾಜ ಶ್ರೀಧರ, ಶ್ರೀನಿವಾಸ ಇತರರು ಜ್ಯೋತಿ ಬೆಳಗಿಸಿದರು. ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲೂ ಪ್ರತಿಜ್ಞಾ ಕಾರ್ಯಕ್ರಮ ವೀಕ್ಷಿಸಲಾಯಿತು.

23 ಗ್ರಾಪಂಗಳಲ್ಲಿ ವ್ಯವಸ್ಥೆ

ಸಿದ್ದಾಪುರ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಪದಗ್ರಹಣ ನಿಮಿತ್ತ ತಾಲೂಕಿನ 23 ಗ್ರಾಪಂ ಹಾಗೂ ಪಟ್ಟಣದ 6 ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ತಾಲೂಕು ಕಾಂಗ್ರೆಸ್ ಸಮಿತಿ ವ್ಯವಸ್ಥೆ ಮಾಡಿತ್ತು.

ತಾಲೂಕು ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ, ಡಿಕೆಶಿ ನೇತೃತ್ವದಲ್ಲಿ ರಾಜ್ಯ ಹಾಗೂ ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬಲಗೊಳ್ಳಲಿದೆ ಎಂದರು.

ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಎಸ್.ಬಿ. ಗೌಡ ಹಾಗೂ ಜಿಲ್ಲಾ ಕಾಂಗ್ರೆಸ್​ನ ಕಾನೂನು ಸಮಿತಿಯ ಮಾಜಿ ಅಧ್ಯಕ್ಷ ಎಆರ್.ಎಂ. ಹೆಗಡೆ ಬಾಳೇಸರ ಉದ್ಘಾಟಿಸಿ ಮಾತನಾಡಿದರು.

ಪಕ್ಷದ ತಾಲೂಕು ಉಸ್ತುವಾರಿ ಶ್ರೀನಿವಾಸ ಹಳ್ಳಳ್ಳಿ, ವೀಕ್ಷಕ ದೀಪಕ ಹೆಗಡೆ ದೊಡ್ಡೂರು, ರಾಜು ಉಗ್ರಾಣಕರ, ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ, ಹನುಮಂತ ನಾಯ್ಕ ಹೊಸೂರು, ಸುನೀಲ ಇತರರಿದ್ದರು.

ಕಾರ್ಯಕರ್ತರಲ್ಲಿ ಹೊಸ ಹುರುಪು

ಭಟ್ಕಳ: ಡಿಜಿಟಲ್ ತಂತ್ರಜ್ಞಾನದ ಮೂಲಕ ನಡೆದ ಪದಗ್ರಹಣ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.

ಮುರ್ಡೆಶ್ವರದಲ್ಲಿ ಪದಗ್ರಹಣ, ಪ್ರತಿಜ್ಞಾವಿಧಿ ಕಾರ್ಯಕ್ರಮ ವೀಕ್ಷಿಸಿ ಅವರು ಮಾತನಾಡಿದರು. ಡಿಕೆಶಿ ಸಮರ್ಥ ನಾಯಕ. ಪ್ರಭಾವಶಾಲಿ ನಾಯಕನೊಬ್ಬ ಕರ್ನಾಟಕದ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವದು ಸಂತಸದ ಸಂಗತಿ. ಅವರ ಅಧ್ಯಕ್ಷತೆಯಲ್ಲಿ ಪಕ್ಷವೂ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಕರೊನಾ ಮಹಾಮಾರಿಯ ಅಟ್ಟಹಾಸ ಇರದಿದ್ದರೆ ಲಕ್ಷಾಂತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದರು. ಆದರೂ ನೂತನ ತಂತ್ರಜ್ಞಾನದ ಮೂಲಕ ಕೋಟ್ಯಂತರ ಕನ್ನಡಿಗರು ಪ್ರತಿಜ್ಞಾವಿಧಿಯನ್ನು ಕಣ್ತುಂಬಿಕೊಂಡಿದ್ದಾರೆ ಎಂದರು.

ಭಟ್ಕಳ ಹೊನ್ನಾವರ ವಿಧಾನಸಭೆ ಕ್ಷೇತ್ರದ ಎಲ್ಲ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಸಿಂಧೂ ಭಾಸ್ಕರ, ರಮೇಶ ಮೊಗೇರ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕ, ಅಬ್ದುರ್ ರಹೀಮ್ ತಾ.ಪಂ ಸದಸ್ಯ ಮಹಾಬಲೇಶ್ವರ ನಾಯ್ಕ, ಭಾಸ್ಕರ ನಾಯ್ಕ ಇತರರು ಇದ್ದರು.

ಪಕ್ಷ ಸಂಘಟನೆ, ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕೆಲಸ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಡಿಕೆ ಶಿವಕುಮಾರ್ ಶ್ರಮ ವಹಿಸುವರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಡಿಕೆಶಿ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಕಾರ್ಯಕರ್ತರಲ್ಲಿ ಹುರುಪು ಮೂಡಿದೆ. | ಮಂಕಾಳ ಎಸ್ ವೈದ್ಯ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net