

ಬಾಗಲಕೋಟೆ: ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ೨೦ ದಿನಗಳಿಗೂ ಹೆಚ್ಚು ಕಾಲ ಸಂಚರಿಸಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸೂಚನೆ ಇದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಜನರಿಗೆ ಬಿಜೆಪಿ ದುರಾಡಳಿತ, ಭ್ರಷ್ಟಾಚಾರ ಬೇಸರವಾಗಿದೆ. ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಪಿಎಸ್‌ಐ ಹಗರಣದಲ್ಲಿ ರಾಜ್ಯದ ಬಿಜೆಪಿ ಸಚಿವರು ಭಾಗಿಯಾಗಿದ್ದರು. ಹಗರಣದಲ್ಲಿ ಭಾಗಿಯಾಗಿದ್ದ ದಿವ್ಯಾ ಅವರ ಕಾರು ಗೃಹ ಸಚಿವ ಅರಗ ಜ್ಞಾನೇಂದ್ರ ಮನೆ ಮುಂದೆ ನಿಂತಿರುವುದು ಬಹಿರಂಗವಾಗಿತ್ತು. ಭ್ರಷ್ಟಾಚಾರ ವಿಷಯವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲಿಂದ ಮೇಲೆ ಸರ್ಕಾರ ವಿರುದ್ಧ ಚಾಟಿ ಬೀಸಿದ್ದಾರೆ. ಮುರುಘಾಮಠದಲ್ಲಿ ಬಿಜೆಪಿ ನಾಯಕರ ಹಣವಿದೆ ಅಂತ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೇ ತನಿಖೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ಸರ್ಕಾರ ಶೇ.೪೦ ಸರ್ಕಾರ ಅಂತ ನಾವು ಆರೋಪ ಮಾಡಿಲ್ಲ. ಗುತ್ತಿಗೆದಾರರ ಸಂಘ ಆರೋಪ ಮಾಡಿದೆ. ಓರ್ವ ಗುತ್ತಿಗೆದಾರರ ಕಮಿಷನ್ ವ್ಯವಹಾರಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭದ್ರಾವತಿ ಕಾಂಗ್ರೆಸ್ ಸಂಗಮೇಶ ಬಿಜೆಪಿಗೆ ಕರೆತರಲು ಆಹ್ವಾನ ನೀಡಿದ್ದರು. ಈ ವಿಷಯವಾಗಿ ೫೦ ಕೋಟಿ ರೂ. ಕೊಟ್ಟರು ಕಾಂಗ್ರೆಸ್ ಬಿಡಲ್ಲ ಅಂತ ಬಿಜೆಪಿ ನಾಯಕ, ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದರು. ಬೆಂಗಳೂರು ಗ್ರಾಮಾಂತರ ಪಿಎಸ್‌ಐ ಪ್ರಕರಣ ಅನೇಕ ಅನುಮಾನಗಳಿಗೆ ಪುಷ್ಠಿ ನೀಡಿದೆ. ಜನ ಇದನೆಲ್ಲ ಗಮನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಬಲ ಬಂದಿದೆ. ಮುನಿಯಪ್ಪ, ಎಚ್.ಕೆ.ಪಾಟೀಲ ಅಂತ ಹಿರಿಯ ನಾಯಕರಿಗೆ ಅನೇಕ ಜವಾಬ್ದಾರಿ ವಹಿಸಲಾಗಿದೆ. ರಾಜ್ಯ ಬಿಜೆಪಿ ಸಂಕಲ್ಪ ಯಾತ್ರೆಗೆ ಬೆಂಬಲ ಸಿಗುತ್ತಿಲ್ಲ ಎಂದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ಗಮನಕ್ಕೆ ಬಂದಿದೆ. ಪದಗಳನ್ನು ಅರ್ಥೈಸಿಕೊಳ್ಳುವಾಗ ಎಚ್ಚರ ಇದ್ದು ಮಾತನಾಡಬೇಕು. ಈಗಾಗಲೇ ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡಿದ್ದಾರೆ ಎಂದರು.
ಪಕ್ಷದ ಟಿಕೆಟ್‌ಗಾಗಿ ಅರ್ಜಿ ಅಹ್ವಾನ
ರಾಜ್ಯದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪಕ್ಷದ ಟಿಕೆಟ್‌ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ನ.೫ ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ೪-೫ ಅರ್ಜಿಗಳು ಬರುವ ನಿರೀಕ್ಷೆ ಇದೆ. ಕಳೆದ ಸಾರಿ ಸೋತ ಅಭ್ಯರ್ಥಿಗಳು ಈ ೫ ವರ್ಷದಲ್ಲಿ ಮನೆಯಲ್ಲಿ ಕುಳಿತಿಲ್ಲ. ಕ್ಷೇತ್ರದಲ್ಲಿ ನಿರಂತರ ಸಂಚಾರ, ಕಾರ್ಯಕರ್ತರೊಂದಿಗೆ ಭೇಟಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ಎಲ್ಲ ಮುಖಂಡರು, ಕಾರ್ಯಕರ್ತರ ಸಭೆ ನಡೆಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಎದುರಿಸಲು ಪಕ್ಷ ಸಮರ್ಥವಾಗಿದೆ ಎಂದು ಎಸ್.ಜಿ.ನಂಜಯ್ಯನಮಠ ಹೇಳಿದರು.