

ಭಟ್ಕಳ: ಕರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ಘೊಷಿಸಿದ್ದರಿಂದ ಭಟ್ಕಳದ ದೋಣಿಗಳಲ್ಲಿ ದುಡಿಯಲು ಬಂದ ಪಶ್ಚಿಮ ಬಂಗಾಳ ಮೂಲದ ನೂರಾರು ಕಾರ್ವಿುಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
24 ಪರಾಗಣ ಜಿಲ್ಲೆಯ ಸುಮಾರು ನೂರಕ್ಕೂ ಹೆಚ್ಚು ಮೀನುಗಾರರು ಇಲ್ಲಿನ ಪರ್ಸೀನ್ ಮತ್ತು ಫಿಶಿಂಗ್ ಬೋಟ್ಗಳಲ್ಲಿ ದುಡಿಯುತ್ತಿದ್ದರು. ಕಳೆದ 46 ದಿನದಿಂದ ಅತ್ತ ಮನೆಗೂ ತೆರಳಲಾರದೆ, ಇತ್ತ ಉದ್ಯೋಗವೂ ಇಲ್ಲದೆ ಅವರು ಸಮಸ್ಯೆ ಎದುರಿಸುತ್ತಿದ್ದಾರೆ.
ಕಾರ್ವಿುಕರ ಊಟೋಪಚಾರಕ್ಕೆ ಬೋಟ್ ಮಾಲೀಕರು ದಿನಸಿ ವಸ್ತುಗಳನ್ನು ವಿತರಿಸಿದ್ದಾರೆ. ಆದರೆ, ಅವರಿಗೆ ಹಣಕಾಸಿನ ತೊಂದರೆ ಎದುರಾಗಿದೆ. ದುಡಿಮೆ ಇಲ್ಲದ ಕಾರಣ ನಿತ್ಯದ ಸಣ್ಣಪುಟ್ಟ ಖರ್ಚಿಗೂ ಹಣವಿಲ್ಲದೆ, ಪರದಾಡುತ್ತಿದ್ದಾರೆ. ಇದರಿಂದ ತಮ್ಮ ಊರಿಗೆ ತೆರಳಲು ವ್ಯವಸ್ಥೆ ಮಾಡಿ ಎಂದು ಬೋಟ್ ಮಾಲೀಕರಲ್ಲಿ ಮನವಿ ಮಾಡುತ್ತಿದ್ದಾರೆ.
ಮೀನುಗಾರಿಕೆ ಹಂಗಾಮು ಮುಕ್ತಾಯವಾಗುತ್ತಿದೆ. ಕಾರ್ವಿುಕರನ್ನು ಊರಿಗೆ ಕಳಿಸಲು ವ್ಯವಸ್ಥೆ ಮಾಡಬೇಕು ಎಂದು ಮೀನುಗಾರರ ಯುವ ಮುಖಂಡ ಮಹೇಶ ಖಾರ್ವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಾವು ಪಶ್ಚಿಮ ಬಂಗಾಳದಿಂದ ಇಲ್ಲಿ ದುಡಿಯಲು ಬಂದಿದ್ದೇವೆ. ಲಾಕ್ ಡೌನ್ ನಿಂದಾಗಿ ನಾವು ಊರಿಗೆ ಹೋಗಲಾರದೆ ತೊಂದರೆಗೆ ಸಿಲುಕಿದ್ದೇವೆ. ಹೇಗಾದರು ಮಾಡಿ ನಮ್ಮನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿ.| ಚಿತ್ತರಂಜನ್ ಬೋಟ್ ಕಾರ್ವಿುಕ