ಕಷ್ಟದಲ್ಲಿ ಕಾಳುಮೆಣಸು ಕೃಷಿಕ

10sirsi2
Published on

ಶಿರಸಿ: ಜಿಲ್ಲೆಯ ಕಾಳುಮೆಣಸು ಬೆಳೆಗಾರರು ಬಳ್ಳಿಗೆ ಅಡರಿದ ಎಲೆ ಕೊಳೆ ರೋಗದಿಂದ ಕಂಗಾಲಾಗಿದ್ದಾರೆ. ತೋಟಗಳಲ್ಲಿ ಬಲಿತ ಬಳ್ಳಿಗಳು ಕೂಡ ಕೊಳೆತು ಸಾಯುತ್ತಿವೆ. ಇದರ ನಿವಾರಣೆಗೆ ರೈತರು ಪರದಾಡುತ್ತಿದ್ದಾರೆ.

ಜಿಲ್ಲೆಯಲ್ಲಿನ ಗುಣಮಟ್ಟದ ಕಾಳು ಮೆಣಸಿಗೆ ದೇಶಾದ್ಯಂತ ಬೃಹತ್ ಮಾರುಕಟ್ಟೆಯಿದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಾಳುಮೆಣಸು ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಕಾಳುಮೆಣಸಿಗೆ ಅಡರುವ ರೋಗಗಳಿಂದ ಬೆಳೆಗಾರರು ಹೈರಾಣಾಗುತ್ತಿದ್ದಾರೆ. ಶ್ರಮಕ್ಕೆ ತಕ್ಕ ಉತ್ಪಾದನೆ ದೊರೆಯದೆ ನಷ್ಟದ ಸುಳಿಗೆ ಸಿಲುಕುತ್ತಿದ್ದಾರೆ. ಪ್ರಸಕ್ತ ವರ್ಷ ಜಿಲ್ಲಾದ್ಯಂತ ಹದವಾದ ಮಳೆ ಸುರಿಯುತ್ತಿದೆ. ಕಾಳುಮೆಣಸಿಗೆ ಫೈಟೋಪೋರಾ ಕ್ಯಾಪ್ಸಿಸಿ ಶೀಲೀಂದ್ರದ ದಾಳಿಯ ಕಾರಣಕ್ಕೆ ಎಲೆ ಕೊಳೆಯುವ ರೋಗ ಕಾಣಿಸಿಕೊಂಡಿದೆ. ಆರಂಭಿಕ ಹಂತದಲ್ಲಿ ಎಲೆ ಕೊಳೆಯುತ್ತದೆ. ಒಂದೊಮ್ಮೆ ರೋಗ ಉಪಶಮನವಾಗದಿದ್ದರೆ ನಿಧಾನವಾಗಿ ವಾರದೊಳಗೆ ಸುಳಿ, ಕಾಂಡಗಳು ಕೊಳೆತು ಇಡೀ ಬಳ್ಳಿ ನಾಶವಾಗುತ್ತದೆ.

ಶೇ. 50ರಷ್ಟು ಬಳ್ಳಿಗೆ ರೋಗ: ಬೆಳೆ ಸಮೀಕ್ಷೆ ವರದಿಯನ್ವಯ ಜಿಲ್ಲೆಯಲ್ಲಿ 4,109.58 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸನ್ನು ಬೆಳೆಯಲಾಗುತ್ತಿದೆ. ಈ ಪೈಕಿ ಶೇ. 75ರಷ್ಟು ಕ್ಷೇತ್ರದಲ್ಲಿ ಈ ರೋಗ ಶೇ. 50ರಷ್ಟು ಬಳ್ಳಿಗಳಿಗೆ ವ್ಯಾಪಿಸಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ಶಿರಸಿ ತಾಲೂಕಿನಲ್ಲಿ ಈ ರೋಗ ವ್ಯಾಪಕವಾಗಿದೆ. ಭೈರುಂಬೆ, ವಾನಳ್ಳಿ, ಸಾಲಕಣಿ, ಬನವಾಸಿ ಸೇರಿ ಹಲವೆಡೆ ಈ ರೋಗ ದಿನದಿಂದ ದಿನಕ್ಕೆ ಬಳ್ಳಿಗಳನ್ನು ನಾಶ ಮಾಡುತ್ತಿದೆ. ಮಳೆ ಜೋರಾಗುವ ಕಾಲಘಟ್ಟದಲ್ಲಿ ಈ ರೋಗ ಆರಂಭವಾಗಿದೆ. ತಕ್ಷಣ ಸೂಕ್ತ ನಿರ್ವಹಣೆ ಮಾಡದಿದ್ದರೆ ಬಳ್ಳಿಗಳೆಲ್ಲ ನಾಶವಾಗುತ್ತವೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.

ಕಳೆದ ಕೆಲ ವರ್ಷ ಸಾಕಷ್ಟು ನಷ್ಟ ಅನುಭವಿಸಿದ್ದ ಕಾಳುಮೆಣಸು ಬೆಳೆಗಾರರು ಈ ಬಾರಿ ಎಲೆಕೊಳೆ ರೋಗದ ವಿರುದ್ಧ ಹೋರಾಡಿ ಬಳ್ಳಿಯನ್ನಾದರೂ ರಕ್ಷಿಸಿಕೊಳ್ಳಬೇಕಿದೆ. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಕಾಳುಮೆಣಸು ಕೃಷಿ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂಬುದು ಬೆಳೆಗಾರರ ಮಾತು.

ಕಾಳು ಮೆಣಸಿನ ಬಳ್ಳಿಯ ಎಲೆ ಮತ್ತು ಚಿಗುರಿಗೆ ಕೊಳೆ ನಿಯಂತ್ರಣದ ಮುಂಜಾಗ್ರತೆಯಾಗಿ ಶೇ. 1ರಷ್ಟು ಬೋಡೋ ದ್ರಾವಣ ಸಿಂಪಡಿಸಬೇಕು. ಬುಡ ಕೊಳೆ ನಿಯಂತ್ರಣಕ್ಕಾಗಿ 5 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಶೀಲೀಂದ್ರ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ರೋಗ ಪ್ರಾರಂಭವಾಗಿದ್ದಲ್ಲಿ ರೋಗ ಪೀಡಿತ ಬಳ್ಳಿಗಳಿಗೆ ಮಾತ್ರ ಮೆಟಾಲಾಕ್ಸಿಲ್ ಎಂ. ಜೆಡ್. 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ದ್ರಾವಣ ಸಿಂಪಡಿಸಬೇಕು. ನಂತರ ಶೇ. 1ರ ಬೋಡೋ ದ್ರಾವಣವನ್ನು ಸಿಂಪಡಿಸಬೇಕು. ಕಾಳು ಮೆಣಸಿನ ನೆಲದ ಮೇಲೆ ಹಬ್ಬಿರುವ ಕುಡಿಗಳನ್ನು ಬಳ್ಳಿಯ ಬುಡದಿಂದ ಒಂದು ಗಣ್ಣು ಬಿಟ್ಟು ಕತ್ತರಿಸಿ, ಆ ಭಾಗಕ್ಕೆ ಬೋಡೋ ಪೇಸ್ಟ್ ಹಚ್ಚಬೇಕು. ಕತ್ತರಿಸಿ ತೆಗೆದ ಕುಡಿ ಮತ್ತು ಎಲೆಗಳನ್ನು ತೋಟದಿಂದ ಹೊರ ಹಾಕಬೇಕು. | ವಿ.ಎಂ. ಹೆಗಡೆ ಹಾರ್ಟಿ ಕ್ಲೀನಿಕ್ ವಿಷಯ ತಜ್ಞ

ಉತ್ತಮ ದರದ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ದರವೇ ಸಿಗುತ್ತಿಲ್ಲ. ಆದರೂ ಹಲವಾರು ರೈತರು ಈ ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷದ ಅತಿಯಾದ ಮಳೆಗೆ ಕೊಳೆ ರೋಗ ಬಾಧಿಸಿ ಬಳ್ಳಿಗಳು ನಾಶವಾಗಿದ್ದವು. ಈ ವರ್ಷ ಎಲೆ ಕೊಳೆ ರೋಗ ಆರಂಭವಾಗಿದೆ. ಇದು ಕಾಳುಮೆಣಸು ಉತ್ಪಾದನೆಗೆ ದೊಡ್ಡ ಹೊಡೆತವಾಗಿದೆ. | ಸೋಮಶೇಖರ ಹೆಗಡೆ ಕಾಳುಮೆಣಸು ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net