

ಅಶೋಕ ಶೆಟ್ಟರ ಬಾಗಲಕೋಟೆ: ಆಕಾಶದಲ್ಲಿ ರವಿಜಾರಿ, ಶಶಿಉದಯಿಸುತ್ತಿದ್ದಂತೆ ರನ್ನ ಬೆಳಗಲಿ ಗ್ರಾಮದ ಆಗಸದಲ್ಲಿ ಬಾಣ ಬಿರುಸುಗಳು ಚಿತ್ತಾರ ಮೂಡಲು ಆರಂಭಿಸಿದವು. ಬಂದಲಕ್ಷ್ಮೀ ದೇವಸ್ಥಾನದ ಇಡೀ ಆವರಣ ಪ್ರೇಕ್ಷಕರಿಂದ ತುಂಬಿದ್ದರೆ, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದ ಕವಿಚಕ್ರವರ್ತಿ ವೇದಿಕೆ ಸಾಸ್ಕೃತಿಕ ಕಾಯಕ್ರಮಗಳು ಪ್ರತಿಧ್ವನಿಸುತ್ತಿದ್ದವು.
ಜನರ ಹರ್ಷೋದ್ಘಾರಗಳ ನಡುವೆ ಶನಿವಾರ ರಾತ್ರಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಮೂರು ದಿನಗಳ ರನ್ನ ವೈಭವ-೨೦೨೫ಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಧೋಳದ ರನ್ನ ಪ್ರತಿಷ್ಠಾನದ ಆಶ್ರಯದಲ್ಲಿ ಮೂರು ದಿನಗಳ ರನ್ನ ವೈಭವ ಮೊದಲ ದಿನ ಕವಿಚಕ್ರವರ್ತಿಯ ತವರೂರು ರನ್ನ ಬೆಳಗಲಿ ಗ್ರಾಮದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು.
ರನ್ನ ವೈಭವದ ಹಿನ್ನಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ರನ್ನ ಬೆಳಗಲಿ ಗ್ರಾಮದಲ್ಲಿ ಜಾನಪದ ವಾಹಿನಿ ಕಲಾತಂಡಗಳ ಅದ್ದೂರಿ ಮೆರವಣಿಗೆ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದೆಡೆ ಮಧ್ಯಾಹ್ನ ಮುಧೋಳದಲ್ಲಿ ವಿಚಾರ ಸಂಕಿರನ ನಡೆದರೆ, ಸಂಜೆ ರನ್ನ ಕ್ರೀಡಾಂಗಣದಲ್ಲಿ ಅಂತಾರಾಜ್ಯ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಗಳು ಆರಂಭವಾಗಿ ದೇಶಿ ಕ್ರೀಡೆಗಳ ಪ್ರೇಮಿಗಳನ್ನು ಕ್ರೀಡಾಂಗಣದತ್ತ ಹೆಜ್ಜೆ ಹಾಕುವಂತೆ ಮಾಡಿತು.
ಸಾಂಸ್ಕೃತಿಕ ಝೇಂಕಾರ:
ಶನಿವಾರ ರಾತ್ರಿ ರನ್ನ ಬೆಳಗಲಿ ಗ್ರಾಮದಲ್ಲಿ ರನ್ನ ವೈಭವ ಉತ್ಸವ ಉದ್ಘಾಟನೆಗೂ ಮುನ್ನ ಸಂಜೆಯಿಂದಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ಆರಂಭಗೊಂಡಿತು. ಯಮನಪ್ಪ ಪೂಜೇರಿ ಅವರ ಔಡಕಿ ಪದಗಳು, ಕುಮಾರ ಬಡಿಗೇರ ಅವರ ಶಾಸ್ತ್ರೀಯ ಸಂಗೀತ,ಕೃಷ್ಣಪ್ಪ ಹಾರೂಗೇರಿ ಅವರ ಡೊಳ್ಳಿನ ಪದಗಳು, ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿಗೆ ಬಾಜನರಾದ ಡಾ.ವೆಂಕಪ್ಪ ಸುಗೇತಕರ ಅವರ ಗೋಂದಳಿ ಪದಗಳು, ಕಾಂಚನ ಅರವಿಂದ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಟರಾಜ ಸಂಗೀತ ನೃತ್ಯನಿಕೇತನ ತಂಡದಿಂದ ಮೂಡಿಬಂದ ಸಮೂಹ ನೃತ್ಯ, ಈರಪ್ಪ ಅಥಣಿ ಅವರ ಭಜನಾ ಪದ ಮನಸೂರೆಗೊಳಿಸಿದವು. ಸಂಜೆ ಗದಗ ನಟರಂಗ ಕಲ್ಚರಲ್ ಅಕಾಡೆಮಿ ವತಿಯಿಂದ ನಡೆದ ಲಂಬಾಣಿ ನೃತ್ಯ ಜನರನ್ನು ಸೆಳೆಯಿತು. ರಬಕವಿಯ ಯಶವಂತ ವಾಜಂತ್ರಿ ಅವರ ಹಾಸ್ಯಸಂಜೆ ಜನರನ್ನು ನಗೆಗಡಲಲ್ಲಿ ತೇಲಿಸಿದರೆ, ರಾಚಯ್ಯ ಮುಧೋಳ ನೇತೃತ್ವದ ತಂಡದಿಂದ ಆಕರ್ಷಕ ದೀಪ ನೃತ್ಯ ಹಾಗೂ ಪ್ರಸಿದ್ಧವಾದ ಜೋಗತಿ ನೃತ್ಯ ಬೇರೊಂದು ಲೋಕವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಹುಟ್ಟಿ ಬಂದೆ ಎಲ್ಲಮ್ಮನಾಗಿ ನಿನ್ನ ಮದುವೆ ಮಾಡಿ ಕೊಟ್ಟಾರವ್ವ ಜಾಮಾದಾಗ್ನಿಗೆ ಎನ್ನುವ ನೃತ್ಯವೂ ಜನರಿಂದ ಕಿಕ್ಕಿರಿದು ತುಂಬಿದ್ದ ಆವರಣದಲ್ಲಿ ಸಂಚಲನ ಸೃಷ್ಟಿಸಿತು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ತಡರಾತ್ರಿ ಕನ್ನಡ ಚಲನ ಚಿತ್ರರಂಗದ ಪ್ರಸಿದ್ದ ಸಂಗೀತ ನಿರ್ದೇಶಕ ಗುರುಕಿರಣ ನೇತೃತ್ವದದಲ್ಲಿ ವಿವಿಧ ಕಲಾವಿದರು ನಡೆಸಿಕೊಟ್ಟ ಚಿತ್ರಸಂಗೀತ ಸುಧೆ ಇಡಿ ಮೈದಾನದ ತುಂಬೆಲ್ಲ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.
ಆರು ವರ್ಷಗಳ ಬಳಿಕ ನಡೆದ ಉತ್ಸವ:
೨೦೧೧ರಲ್ಲಿ ಆರಂಭಗೊಂಡಿರುವ ರನ್ನ ವೈಭವ ಉತ್ಸವ ಈ ವರೆಗೂ ಐದು ಸಲ ನಡೆದಿದ್ದು ಇದೀಗ ೬ನೇ ಉತ್ಸವ ಈಗ ನಡೆಯುತ್ತಿದೆ. ೨೦೧೮ರಲ್ಲಿ ಕೊನೆಯದಾಗಿ ರನ್ನ ಉತ್ಸವ ನಡೆದಿತ್ತು. ಅಲ್ಲಿಂದ ನೆರೆ, ಬರ ಹೀಗೆ ಬೇರೆ ಬೇರೆ ಕಾರಣಗಳಿಂದ ಉತ್ಸವ ನಡೆದಿರಲಿಲ್ಲ. ಹೀಗಾಗಿ ಕಳೆದ ಸಲ ಮಳೆ ಬೆಳೆ ಸಮೃದ್ದವಾಗಿದ್ದರಿಂದ ಈ ಸಲ ಉತ್ಸವ ನಡೆಸಬೇಕು ಎನ್ನುವ ಒತ್ತಾಸೆಗೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅಧಿಕಾರಿಗಳು ಉತ್ಸವ ನಡೆಸಲು ತೀರ್ಮಾನಿಸಿ ಅದಕ್ಕೆ ಶನಿವಾರ ಅಧಿಕೃತ ಚಾಲನೆ ನೀಡಲಾಗಿದೆ. ಉದ್ಘಾಟನೆ ರನ್ನ ಬೆಳಗಲಿ ಗ್ರಾಮದಲ್ಲಿ ನಡೆದು, ಎರಡು ಮತ್ತು ಮೂರನೇ ದಿನ ಮುಧೋಳ ರನ್ನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರಮುಖರ ಗೈರು:
ಉತ್ಸವದ ಉದ್ಘಾಟನೆಯನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ನೆರವೇರಿಸಿದರು. ಅಧ್ಯಕ್ಷತೆಯನ್ನು ಮುಧೋಳ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉಪಸ್ಥಿತರಿದ್ದರು. ಆದರೆ, ವಿಶೇಷ ಆವ್ಹಾನಿತರೆಂದು ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರಯಾಂಕ ಖರ್ಗೆ, ಶಿವಾನಂದ ಪಾಟೀಲ, ಎಸ್.ಎಸ್.ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಬಾಳಕರ್ ಸೇರಿ ಹಲವರು ಗೈರು ಉಳಿದಿದ್ದರು.
ಇನ್ನೂ ಉದ್ಘಾಟನೆ ಕಾರ್ಯಕ್ರಮ ಸಂಜೆ ೬ ಗಂಟೆಗೆ ನಡೆಯಬೇಕಿತ್ತು. ಆದರೆ, ಉದ್ಘಾಟಕ ಎಚ್.ಕೆ.ಪಾಟೀಲ ಆಗಮನ ವಿಳಂಭವಾಗಿದ್ದರಿಂದ ಮೂರು ಗಂಟೆ ತಡವಾಗಿ ೯ ಗಂಟಯ ಬಳಿಕ ಜರುಗಿತು.