

ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ಕಳ್ಳೆಗದ್ದೆಗೆ ತೆರಳುವ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ಓಡಾಟಕ್ಕೆ ಗ್ರಾಮಸ್ಥರೇ ಕಾಲು ಸಂಕ ನಿರ್ವಿುಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ವಾರ ಬಿದ್ದ ಮಳೆಗೆ ಹಳ್ಳ ತುಂಬಿ ಹರಿದ ಪರಿಣಾಮ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ತಾಲೂಕು ಕೇಂದ್ರದಿಂದ ಮೂವತ್ತು ಕಿಲೋ ಮೀಟರ್ ದೂರದಲ್ಲಿರುವ ಕಳ್ಳೆಗದ್ದೆಯಲ್ಲಿ ಮೂವತ್ತಕ್ಕೂ ಹೆಚ್ಚು ಮನೆಗಳಿವೆ. ಮುಖ್ಯರಸ್ತೆಗೆ ಸಂಪರ್ಕ ನೀಡುವುದಕ್ಕೆ ಇದೊಂದೆ ರಸ್ತೆ ಆಗಿರುವುದರಿಂದ ಸರ್ವಋತು ರಸ್ತೆಯ ಕನಸನ್ನು ಊರವರು ಹಲವು ವರ್ಷಗಳಿಂದ ಕಾಣುತ್ತಿದ್ದರೂ ಆಳುವ ದೊರೆಗಳಿಗೆ ಮಾತ್ರ ಇವರ ಸಂಕಷ್ಟದ ಅರಿವು ಗೊತ್ತಾಗುತ್ತಿಲ್ಲ.
ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಸಂಪರ್ಕದ ಕೊಂಡಿಯೇ ಕಳಚಿ ಹೋಗುತ್ತದೆ ಎನ್ನುವ ಆತಂಕದಿಂದ ಜನತೆ ಮರದ ಸಂಕವನ್ನು ನಿರ್ವಿುಸಿಕೊಂಡು ಸಂಚರಿಸುತ್ತಿದ್ದಾರೆ.
ಹೊನ್ನಾವರ ತಾಲೂಕಿಗೆ ಸಂಪರ್ಕ ನೀಡುವ ರಸ್ತೆ: ಕಳ್ಳೆಗದ್ದೆಯಿಂದ ಹೊನ್ನಾವರ ತಾಲೂಕಿನ ವಾಟೆಹಳ್ಳದವರೆಗೆ ಕೇವಲ ಏಳು ಕಿ.ಮೀ. ದೂರವಿದ್ದು ಬೇಸಿಗೆಯಲ್ಲಿ ಕೆಲವು ಲಘುವಾಹನಗಳು ಸಂಚರಿಸುತ್ತವೆ. ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಗೊದ್ಲಮನೆ ಮುಖ್ಯ ರಸ್ತೆಯಿಂದ ಕಳ್ಳೆಗದ್ದೆ ಮೂಲಕ ಹೊನ್ನಾವರಕ್ಕೆ ತೆರಳಲು ಈ ಭಾಗದ ಜನತೆಗೆ ಇದು ಹೆಚ್ಚು ಉಪಯೋಗವಾಗುವುದರಿಂದ ಜನಪ್ರತಿನಿಧಿಗಳು ಈ ಕುರಿತು ಹೆಚ್ಚು ಗಮನ ನೀಡಿ ಸೇತುವೆ ಹಾಗೂ ಸರ್ವಋತು ರಸ್ತೆ ನಿರ್ವಿುಸುವುದಕ್ಕೆ ಮುಂದಾಗಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ಕಳ್ಳೆಗದ್ದೆಗೆ ಬರಬೇಕೆಂದರೆ ಇರುವುದು ಒಂದೇ ರಸ್ತೆ. ಈಗ ಅದೇ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಇಲ್ಲಿ ಶಾಶ್ವತವಾದ ರಸ್ತೆ ಆಗಬೇಕಾಗಿದೆ. ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ಸೇತುವೆ ನಿರ್ವಿುಸಿಕೊಡಬೇಕು. | ಅನಂತ ಗೌಡ ಕಳ್ಳೆಗದ್ದೆ
ಕಳ್ಳೆಗದ್ದೆಗೆ ತೆರಳಲು ಶಾಶ್ವತ ಸೇತುವೆ ಅವಶ್ಯಕತೆ ಇದೆ. ಇದಕ್ಕೆ ಜಿಪಂ ಅನುದಾನ ಸಾಕಾಗದೇ ಇರುವುದರಿಂದ ಶಾಸಕರ ಹಾಗೂ ಸಂಸದರ ಗಮನಕ್ಕೂ ತರಲಾಗಿದೆ. ಪಿಎಂಜಿಎಸ್ವೈ ಯೋಜನೆಯಲ್ಲಿಯೂ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಈ ರಸ್ತೆ ಸುಧಾರಣೆ ಮಾಡುವುದರಿಂದ ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಜನತೆಗೆ ಹೆಚ್ಚು ಪ್ರಯೋಜನವಾಗಲಿದೆ. | ಸುಮಂಗಲಾ ವಸಂತ ನಾಯ್ಕ ಮನಮನೆ ಜಿಪಂ ಸದಸ್ಯೆ.
ನೀರು ಹೆಚ್ಚಿಗೆ ಬರುವುದರಿಂದ ರಸ್ತೆ ಕೊಚ್ಚಿಹೋಗಿದೆ. ಸ್ಥಳ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಹಾಗೂ ವಿಧಾನಸಭಾಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ಇಲ್ಲಿ ಶಾಶ್ವತ ಸೇತುವೆ ನಿರ್ವಿುಸುವುದಕ್ಕೆ ಅಂದಾಜು 30 ಲಕ್ಷ ರೂ. ಗಳು ಬೇಕಾಗಬಹುದು ಎಂಬ ಕುರಿತು ವರದಿ ನೀಡಲಾಗಿದೆ. | ಯಮನಪ್ಪ ಜಿಪಂ ಇಂಜಿನಿಯರ್ ಸಿದ್ದಾಪುರ