

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಚಲ್ಯ ಗ್ರಾಮದ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಶ್ರವಣಬೆಳಗೊಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ, ಅವರಿಂದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಹಿರೀಸಾವೆ ಹೋಬಳಿಯ ಮಾಚ ಬುವನಹಳ್ಳಿ ಗ್ರಾಮದ ಸುಹಾಸ್ ಬಿನ್ ಸುರೇಶ್ (19) ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಂತೆ ಬಾಚಳ್ಳಿ ಗ್ರಾಮದ ಶಿವಕುಮಾರ್ ಬಿನ್ ಉಮೇಶ (19) ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಜು.28ರಂದು ಮಧ್ಯಾಹ್ನ 12 ಗಂಟೆಗೆ ಶ್ರವಣಬೆಳಗೊಳ ವ್ಯಾಪ್ತಿಯ ಬರಾಳು ಗೇಟ್ ಹತ್ತಿರ ಇಬ್ಬರು ಯುವಕರು ನಂಬರಿಲ್ಲದ ಬೈಕ್‌ಗಳಲ್ಲಿ ಓಡಾಡುತ್ತಿದ್ದಾಗ ಪೊಲೀಸರು ಅನುಮಾನಾಸ್ಪದವಾಗಿ ತಡೆದು ಪರಿಶೀಲಿಸಿದ್ದಾರೆ. ಆಗ ಬೈಕ್ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಕಳ್ಳತನ ಮಾಡಿದ್ದ ಒಟ್ಟು 9 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ಡಿವೈಸ್ಪಿ ರವಿಪ್ರಸಾದ್, ಹಿರೀಸಾವೆ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ್, ಶ್ರವಣಬೆಳಗೊಳ ಪೊಲೀಸ್ ಠಾಣೆ ಪಿಎಸ್‌ಐ ಶಿವಶಂಕರ ಹಾಗೂ ಸಿಬ್ಬಂದಿ ವೀರಭದ್ರೇಗೌಡ, ಕಾಂತರಾಜು, ಕಿರಣ, ರಾಕೇಶ, ಜಗದೀಶ, ಶಿವಾನಂದ, ಮಂಜುನಾಥ, ದರ್ಶನ್, ಚಾಲಕ ಅನಿಲ್ ಕುಮಾರ, ಸಿಡಿಆರ್ ವಿಭಾಗದ ಹೆಡ್ ಕಾನ್‌ಸ್ಟೇಬಲ್ ಫಿರ್‌ಖಾನ್ ಪಾಲ್ಗೊಂಡಿದ್ದರು.