

ರಾಮನಗರ : ತಾಲೂಕಿನ ಸುಗ್ಗನಹಳ್ಳಿ ಬಳಿ ಕಲ್ಲುಗಾಣಿಗಾರಿಕೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ಸ್ಥಳೀಯರು ತಹಸೀಲ್ದಾರ್ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಸುಗ್ಗನಹಳ್ಳಿ ಸರ್ವೇ ನಂ. 71 ಮತ್ತು 74ರಲ್ಲಿ ಕಲ್ಲುಗಣಿಗಾರಿಕೆ ಅನುಮತಿ ಕೋರಿರುವ ಜಾಗಕ್ಕೆ ಸ್ಥಳ ಮಹಜರಿಗೆ ರಾಮನಗರ ತಾಲೂಕು ತಹಸೀಲ್ದಾರ್ ತೇಜಸ್ವಿನಿ ಮತ್ತು ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಗಮಿಸಿದ ವೇಳೆಯಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟಿಸಿದರು. ರಾಜಕೀಯ ಹಿತಾಸಕ್ತಿಗೆ ಒಳಗಾಗದೆ ಸ್ಥಳದ ಸಂಪೂರ್ಣ ಮಾಹಿತಿ ತಿಳಿದು ಗಣಿಗಾರಿಕೆಗೆ ಅನುಮತಿ ನೀಡದೆ, ನೈಜ ವರದಿ ನೀಡುವಂತೆ ಆಗ್ರಹಿಸಿದರು.
ಜಯಶ್ರೀ ಮತ್ತು ಡಿ.ಸಿ. ಕುಮಾರ್ ಎಂಬುವರು ಸುಗ್ಗನಹಳ್ಳಿ ಗ್ರಾಮದ ಸರ್ವೇ ನಂ. 71 ಮತ್ತು 74 ರಲ್ಲಿ ಕಲ್ಲುಗಣಿಗಾರಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿಕೊಂಡಿದ್ದಾರೆ. ಸದರಿ ಸ್ಥಳದ ಆಸುಪಾಸಿನಲ್ಲಿ 400 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಿದೆ. 50 ರಿಂದ 60 ಎಕರೆ ಪ್ರದೇಶದಲ್ಲಿ ಅಡಕೆ, ಮತ್ತು ರೇಷ್ಮೆ ಬೆಳೆ ಬೆಳೆಯುತ್ತಿದ್ದಾರೆ. ಜತೆಗೆ ಗಣಿಗಾರಿಕೆಗೆ ಅನುಮತಿ ಕೋರಿರುವ ಜಾಗದಿಂದ ಸುಮಾರು 30 ರಿಂದ 40 ಅಡಿಗಳಷ್ಟು ದೂರದಲ್ಲೇ 8 ವಾಸದ ಮನೆಗಳಿವೆ. ಸುಮಾರು 10 ರಿಂದ 15 ಜನ ಮಕ್ಕಳು ಶಾಲೆಗೆ ಪ್ರತಿದಿನ ಓಡಾಡುತ್ತಾರೆ. ಗೋಮಾಳವು ಸುಮಾರು 15 ರಿಂದ 16 ಗ್ರಾಮಗಳಿಂದ ಸುತ್ತುವರಿದಿವೆ ಎಂದು ಗ್ರಾಮಸ್ಥರು ತಿಳಿಸಿದರು.
ಗೋಮಾಳ ಜಾಗದಲ್ಲಿ ಕಲ್ಲುಗಣಿಗಾರಿಕೆ ನಡೆದರೆ ಹೊರಬರುವ ಧೂಳಿನಿಂದ, ಶಬ್ದ ಮತ್ತು ವಾಹನ ದಟ್ಟಣೆಯಿಂದ ಸುತ್ತಮುತ್ತಲಿನ ಜಮೀನಿನಲ್ಲಿರುವ ಮಾವು ಮತ್ತು ರೇಷ್ಮೆ ಬೆಳೆಗಳು ಹಾಳಾಗುತ್ತವೆ. ಕಲುಷಿತ ವಾತಾವರಣದಿಂದ ಜನ ಹಾಗೂ ಜನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಮುಂದಿನ ಪೀಳಿಗೆಯ ಶಿಶುಗಳು ಅಂಗವೈಕಲ್ಯದಿಂದ ಜನಿಸಿ ನರಕಯಾತನೆ ಪಡುವ ಸಂಭವ ಹೆಚ್ಚಾಗಿರುತ್ತವೆ. ಸದರಿ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತೆ ಸರ್ವೇ ನಂ 67/1 ರಲ್ಲಿ ಮಾರಮ್ಮ ದೇವಿಯ ದೇವಸ್ಥಾನವಿದ್ದು, ಈ ದೇವಸ್ಥಾನವು ಸುಗ್ಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ದೈವವಾಗಿರುತ್ತದೆ. ಕಲ್ಲುಗಾರಿಕೆಯಿಂದ ಸಿಡಿಯುವ ಸಿಡಿಮದ್ದಿನ ಶಬ್ದಕ್ಕೆ ಸದರಿ ಚೆಕ್ ಡ್ಯಾಂ ಹಾಳಾದರೆ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಅಂತರ್ಜಲ ಅಭಾವ ತಲೆದೋರುತ್ತದೆ ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ತಿಳಿಸಿದರು.
ಸದರಿ ಜಾಗದ ಸನಿಹದಲ್ಲೇ ರಣಹದ್ದು ಪಕ್ಷಿಧಾಮ, ರಾಮದೇವರ ಬೆಟ್ಟ, ಮಂಚನಬೆಲೆ ಜಲಾಶಯಗಳಿವೆ. ಈ ಕಾರಣದಿಂದ ನೈಜ ವರದಿ ನೀಡಬೇಕು. ಜನರಿಗೆ ಪೂರಕವಾಗಿರುವ ವರದಿ ನೀಡಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.
ಗ್ರಾಮಸ್ಥರು, ಸ್ಥಳೀಯ ಸಾರ್ವಜನಿಕರಿಂದ ತಹಸೀಲ್ದಾರ್ ತೇಜಸ್ವಿನಿ ಮನವಿ ಸ್ವೀಕರಿಸಿ ವಾಸ್ತವ ವರದಿ ನೀಡುವ ಭರವಸೆಯನ್ನು ನೀಡಿದರು. ರಾಮನಗರ ಗ್ರಾಮಾಂತರ ಪೊಲೀಸರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದರು.
ಕಣ್ಣೀರು ಹಾಕಿ ಅಲವತ್ತುಕೊಂಡ ವೃದ್ಧೆ
ನಾನು ಈಗಾಗಲೇ ಕಾಯಿಲೆಯಿಂದ ನರಳುತ್ತಿದ್ದೇನೆ. ಮಾವು ಬೆಳೆಸಲು ದೂರದಿಂದ ನೀರುತಂದು ಮರಗಳನ್ನು ಜೀವನಾಧಾರಕ್ಕೆ ಬೆಳೆಸಿದ್ದೇನೆ. ಅದರಲ್ಲೇ ನಮ್ಮ ಕುಟುಂಬ ಜೀವನ ನಡೆಸಬೇಕು. ಗಣಿಗಾರಿಕೆ ಇಲ್ಲಿ ನಡೆದರೆ ನಮ್ಮ ಕುಟುಂಬ ಎಲ್ಲಿ ಹೋಗಬೇಕು. ನಮ್ಮ ಮುಂದಿನ ಪೀಳಿಗೆ ಕಥೆ ಏನು? ನೆಮ್ಮದಿ ಜೀವನಕ್ಕೆ ನಮಗೆ ನೆರವಾಗಿ, ಈ ಜಾಗದಲ್ಲಿ ಗಣಿಗಾರಿಕೆ ಬೇಡ ಎಂದು ವೃದ್ಧ ಮಹಿಳೆಯೊಬ್ಬರು ಕಣ್ಣಿರು ಹಾಕುತ್ತಾ ತಹಸೀಲ್ದಾರ್ ಅವರಲ್ಲಿ ಅಲವತ್ತುಕೊಂಡರು.