

ಕಲಬುರಗಿ: ಕಲ್ಯಾಣ ಕರ್ನಾಟಕದ ೭೫ನೇ ವರ್ಷದ ಉತ್ಸವ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು. ಎಲ್ಲೆಡೆ ಹಬ್ಬದ ವಾತಾವರಣ ಮೂಡುವಂತಾಗಬೇಕು ಎಂದು ಕಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಮಂಜುನಾಥ ನಾಲವಾರಕರ್ ಒತ್ತಾಯಿಸಿದ್ದಾರೆ.
ಒಕ್ಕೂಟದ ನಿಯೋಗ ಸೋಮವಾರ ಡಿಸಿ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಲಿದೆ. ಈ ಭಾಗದ ವಿಮೋಚನೆಯ ೭೫ನೇ ವರ್ಷ, ೩೭೧(ಜೆ) ತಿದ್ದುಪಡಿಯಾದ ೧೦ ವರ್ಷಾಚರಣೆ ಸಂಭ್ರಮ ಆಚರಿಸುತ್ತಿರುವುದು ಸ್ವಾಗತಾರ್ಹ. ಈ ಉತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಕಕ ಉತ್ಸವದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಿ ಈ ಭಾಗದ ಇತಿಹಾಸ, ಹೋರಾಟಗಾಥೆ ತಿಳಿಸಬೇಕು. ತಜ್ಞರು, ಹಿರಿಯ ಪತ್ರಕರ್ತರು, ಸಾಹಿತಿಗಳು, ಉಪನ್ಯಾಸಕರನ್ನು ಒಳಗೊಂಡ ಕಕ ಇತಿಹಾಸ ಸಮಿತಿ ರಚಿಸಿ ವರ್ಷದೊಳಗೆ ಇತಿಹಾಸವನ್ನು ಸಂಗ್ರಹಿಸಿ ಪುಸ್ತಕ ಮುದ್ರಿಸಬೇಕು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಅಭಿವೃದ್ಧಿಪಡಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಡಾ.ಬಾಬು ಜಗಜೀವನ್‌ರಾಂ ಪ್ರತಿಮೆ ಸುತ್ತ ಅಭಿವೃದ್ಧಿಗೆ ಮಂಡಳಿಯಿAದ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ವೇಗ ನೀಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಸಚಿನ್ ಫರಹತಾಬಾದ್, ಮನೋಹರ ಬೀರನೂರ, ಶರಣು ಹೊಸಮನಿ, ನಾಗರಾಜ ಸ್ವಾದಿ, ವಿ.ಎಚ್. ವಾಲಿಕಾರ, ಸಿದ್ದು ಜಮಾದಾರ, ಮುತ್ತಣ್ಣ, ಪ್ರಹ್ಲಾದ್ ಹಡಗಿಲಕರ, ಸಂತೋಷ ಚೌಧರಿ, ಆನಂದ ತೆಗನೂರ ಇತರರಿದ್ದರು.