

ಬಾಗಲಕೋಟೆ: ಕಲಿಕೆ ಜೊತೆಗೆ ಭವಿಷ್ಯಧ ಕೌಶಲಗಳ ಜ್ಞಾನ ಹೊಂದುವುದು ಅವಶ್ಯವಾಗಿದ್ದು, ಐಟಿಐ, ಡಿಪ್ಲೋಮಾ ಹಾಗೂ ಇಂಜನಿಯರಿಂಗ್ ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಕೌಶಲ ಮೀಷನ್ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತಿಚಿನ ದಿನಮಾನಗಳಲ್ಲಿ ಕೌಶಲ ಆಧಾರಿತ ಶಿಕ್ಷಣವನ್ನು ಹೊಂದಿದ ಅಭ್ಯರ್ಥಿಗಳಿಗೆ ಬೇಡಿಕೆ ಇರುವದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಸಂಬಂಧ ಹೆಚ್ಚಿನ ತಿಳುವಳಿಕೆ ನೀಡುವ ಕೆಲಸ ಮಾಡಿರಿ ಎಂದರು.
ಮಹಿಳೆಯರಿಗೆ ಕೌಶಲವುಳ್ಳ ವಿವಿಧ ತರಬೇತಿಗಳನ್ನು ನೀಡಿದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು ಇತರೇ ಕೌಶಲ್ಯ ತರಬೇತಿಗಳನ್ನು ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಗುರುಪಾದಯ್ಯ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಸಕ್ಕರೆ, ಸಿಮೇಂಟ್, ಸೋಲಾರ್, ಗ್ರೈನೈಟ್, ನೇಕಾರಿಕೆಯಂತಹ ಕೈಗಾರಿಕೆಗಳಿದ್ದು, ಉದ್ಯಮ ಆಧಾರಿತ ಬೇಡಿಕೆಯನುಸಾರ ಅವಶ್ಯವಿರುವ ಕೌಶಲ್ಯ ತರಬೇತಿಗಳನ್ನು ಜನ ಶಿಕ್ಷಣ ಸಂಸ್ಥೆ, ಆರ್ ಸೆಟಿ, ಜಿ ಟಿ ಟಿ ಸಿ ಹಾಗೂ ಐ ಟಿ ಐ ನಂತಹ ಸರ್ಕಾರಿ ಸಂಸ್ಥೆಗಳು ಹಾಗೂ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಇಲಾಖೆಯಿಂದ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ್ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.