

ಬಾಗಲಕೋಟೆ: ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮ ಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಶನಿವಾರದಂದು ಜರುಗಿದ ಶಾಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2024-25 ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಶಾಲಾ ಹಂತದಲ್ಲಿ ವಿವಿಧ ಕ್ರೀಯಾ ಯೋಜನೆಗಳನ್ನು ಹಾಕಿಕೊಂಡು ಶಿಕ್ಷಕರು ಅನುಷ್ಠಾನಗೊಳಿಸುವದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮಥ್ಯ ಸುಧಾರಿಸಿ ಫಲಿತಾಂಶವು ನೂರಕ್ಕೆ ನೂರು ಬರಲು ಸಾಧ್ಯವಾಗುತ್ತದೆ ಎಂದರು.
ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳು ಮತ್ತು ಪಾಲಕರ ಮನಪರಿವರ್ತಿಸುವ ಕೆಲಸ ಮಾಡಿ ಹಾಜರಾತಿ ಉತ್ತಮ ಪಡಿಸಬೇಕು. . ವಿದ್ಯಾರ್ಥಿಗಳೊಂದಿಗೆ ಬೆರತು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಪ್ರೇರಣಾದಾಯಕ ಕಥೆಗಳನ್ನು ಹೇಳುವದರಿಂದ ಮಕ್ಕಳಲ್ಲಿ ಬದಲಾವಣೆ ಕಂಡು ಬರುತ್ತದೆ ಗುಣಮಟ್ಟದ ಬೋಧನೆ ಇದ್ದಲ್ಲಿ ಗುಣಮಟ್ಟದ ಫಲಿತಾಂಶ ಕೂಡ ಬರುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಪ್ರಾಂಶುಪಾಲರ್‍ರು ಶ್ರಮ ವಹಿಸಬೇಕಾಗುತ್ತದೆ ಎಂದು ಹೇಳಿದರು.
ವರ್ಗಾವಣೆಯಿಂದ ಶಿಕ್ಷಕರ ಹುದ್ದೆ ಖಾಲಿಯಾದ ತಕ್ಷಣ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ಶಾಲೆಯ ಸ್ವಚ್ಚತೆಯನ್ನು ಡಿ ಗ್ರುಪ್ ಸಿಬ್ಬಂದಿಯಿಂದ ಅಥವಾ ಗ್ರಾಮ್ ಪಂಚಾಯತ್ ನಿಂದ ನಿರ್ವಹಿಸಿ, ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಸರಿಸುವದರಿಂದ ಶಿಕ್ಷಕರ ನಡೆ, ನುಡಿ, ವೇಷ ಭಾಷೆ ಎಲ್ಲವೂ ಅಚ್ಚುಕಟ್ಟಾಗಿರಲಿ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಕೆ ನಂದನೂರ ಮಾತನಾಡಿ ಎಸ್ ಎಸ್ ಎಲ್ ಸಿ 2024 ರ ಪರೀಕ್ಷೆಯಲ್ಲಿ ಶೇಕಡಾ 100 ಮತ್ತು ಶೂನ್ಯ ಫಲಿತಾಂಶ ಸಾಧಿಸಿದ ಶಾಲೆಗಳು ಹಾಗೂ ವಿವಿಧ ಕ್ರೀಯಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಡಿವಾಯ್‍ಪಿಸಿಯ ಉಪ ಸಮನ್ವಯಾಧಿಕಾರಿ ಸಿ.ಆರ್.ಓಣಿ ಸೇರಿದಂತೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಎಲ್ಲ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.