

ಬಾಗಲಕೋಟೆ: ಜಿಲ್ಲೆಯಲ್ಲಿ ಗುಣಮಟ್ಟವಲ್ಲದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಮೂರು ಕಿರಾಣಿ ಸ್ಟೊರ‍್ಸ ಮಾಲಿಕರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ೨೦೦೬ರಡಿ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಎಪ್ರೀಲ್ ಮಾಹೆಯಲ್ಲಿಯೇ ೧೪೩ ಆಹಾರ ಮಾದರಿಗಳನ್ನು ಪಡೆಯಲಾಗಿದ್ದು, ಅದರಲ್ಲಿ ೩೦ ಕಾನೂನಾತ್ಮಕ ಮಾದರಿಯಾಗಿದ್ದು, ಅದರಲ್ಲಿ ೮ ಆಹಾರ ಮಾದರಿಗಳು ಕಳೆಪೆಮಟ್ಟದ್ದು ಎಂದು ವರದಿ ಬಂದಿದ್ದು, ಈ ಪೈಕಿ ೩ ಪ್ರಕರಣಗಳನ್ನು ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದಮ್ಮೆ ದಾಖಲಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ದಾಖಲಿಸುವ ಹಂತದಲ್ಲಿವೆ ಎಂದು ತಿಳಿಸಿದರು.
ದಾಖಲಾದ ಪ್ರಕರಣಗಳಲ್ಲಿ ಗದ್ದನಕೇರಿ ಕ್ರಾಸ್‌ನಲ್ಲಿರುವ ಕಿರಾಣಿ ಮೇಘರಾಜ ಕಿರಾಣಿ & ಜನರಲ್ ಸ್ಟೊರ‍್ಸ್ನಲ್ಲಿ ಚಿಲ್ಲಿ ಪೌಡರ, ನವನಗರದ ಕಲಬುರ್ಗಿ ಕಿರಾಣಿ ಸ್ಟೊರ‍್ಸ್ ಮತ್ತು ಕಮತಗಿಯ ರಾಚುಟೇಶ್ವರ ಕಿರಾಣಿ ಸ್ಟೊರ‍್ಸನಲ್ಲಿ ಐಯೋಡಿನ್ ರಹಿತ ಉಪ್ಪು ಮಾರಾಟ ಮಾಡುತ್ತಿದ್ದ ಮಾಲಿಕರ ಮೇಲೆ ಪ್ರಕಟರಣ ದಾಖಲಿಸಲಾಗಿದೆ. ಇನ್ನು ೫ ಜನ ಮಾಲಿಕರ ಮೇಲೆ ಪ್ರಕರಣ ದಾಖಲಿಸು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಕಲಬರಕೆ ಎಂದು ತಿಳಿದು ಬಂದ ಟೀ ಪೌಡರ, ಮಸಾಲೆ ಪೌಡರ, ಸಾಸ, ಚಿಪ್ಸ್, ಜೇನು ತುಪ್ಪ, ಸುಗರ್, ಜಾಗರಿ ಪೌಡರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಪ್ರಕರಣ ದಾಖಲಿಸಲಾಗುವುದೆಂದು ತಿಳಿಸಿದರು.
ಐಯೋಡಿನ್ ರಹಿತ ಉಪ್ಪು ಬಳಕೆಯಿಂದ ಗಳಗಂಡ, ಬುದ್ದಿಮಾಂದ್ಯತೆ ಉಂಟಾಗುತ್ತದೆ. ಸಾರ್ವಜನಿಕರು ಇದರ ಬಗ್ಗೆ ಜಾಗೃತರಾಗಬೇಕು. ಸಹಿ ತಿಂಡಿ, ಕಬಾಬ್ ಹಾಗೂ ಗೋಬಿ ಮಂಚೂರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬಣ್ಣ ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಇದರಿಂದ ಕ್ಯಾನ್ಸರ್ ಮತ್ತು ಇನ್ನೀತರ ರೋಗಗಳು ಬರುವ ಸಂಭವವಿರುತ್ತದೆ. ಅರಶಿನ ಪುಡಿಗೆ ಮೆಟಾಲಿನ್ ಹಳದಿ ಮತ್ತು ಲೆಡ್ ಕ್ರೋಮೆಟ್ ನಂತಹ ರಾಸಾಯನಿಕ ಬೆರಸುತ್ತಾರೆ. ಇದನ್ನು ಬಳಸಿದಲ್ಲಿ ರಕ್ತಹೀನತೆ, ಮೆದುಳಿಗೆ ಹಾನ ಉಂಟಾಗುತ್ತದೆ. ಖರೀದಿಯಲ್ಲಿ ಕಲಬರಕೆ ಕಂಡು ಬಂದಲ್ಲಿ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದು.
ಜಿಲ್ಲಾ ಮಟ್ಟದ ಸಲಹಾ ಸಮಿತಿಯು ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಆರೋಗ್ಯವಂತ ಜೀವನ ನಡೆಸುವಂತೆ ಮಾಡಬೇಕು. ಆಹಾರ ಉತ್ಪಾದನೆ, ಸಾಗಾಣಿಕೆ, ದಾಸ್ತಾನು, ವಿತರಣೆ ಕೆಲಸದಲ್ಲಿ ತೊಡಗಿದ ವ್ಯಾಪಾರಸ್ಥರು ವಾರ್ಷಿಕ ವಹಿವಾಟು ೧೨ ಲಕ್ಷ ರೂ ಮೀರಿದರೆ ಪರವಾಣಿಕೆ ಪಡೆಯಬೇಕು. ೧೨ ಲಕ್ಷಕ್ಕಿಂತ ಕಡಿಮೆ ಇದ್ದವರು ವೆಬ್‌ಸೈಟ್ http://foscos.fssai.gov.in ನಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾಯ್ದೆಯಡಿ ವಸತಿ ನಿಲಯ, ಶಾಲೆ ಹಾಗೂ ಪ್ರತಿನಿತ್ಯ ದಾಸೋಹದ ಕೇಂದ್ರಗಳು ಸಹಿತ ನೊಂದಣಿ ಮಾಡಿಸುವುದಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಆಹಾರ ಸುರಕ್ಷತೆ & ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ವಿಜಯ ಕಂಠಿ, ತಾಲೂಕಾ ಅಧಿಕಾರಿಗಳಾದ ರಾಜಶೇಖರ ಸಾಳಗುಂದಿ, ಇಸಾಕ ಫಾರೂಕ, ಸಂದೀಪ ತಿಡಗುಂದಿ, ದಯಾನಂದ ಹನಮಾಕರ, ಅಪ್ಪಾಜಿ ಹೂಗಾರ, ಸುರೇಶ ಹೊಸಮನಿ ಹಾಗೂ ಇತರರು ಉಪಸ್ಥಿತರಿದ್ದರು.