ಕಾಲುಬಾಯಿ ರೋಗದ ಅರಿವು ಮೂಡಿಸಿ

oppo_2
oppo_2
Published on

ಹನೂರು: ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕಾದರೆ ಕಾಲುಬಾಯಿ ರೋಗ ಸಂಬಂಧ ಹಾಗೂ ವಿದೇಶಗಳಿಗೆ ಗುಣಮಟ್ಟದ ಹಾಲು ರಫ್ತು ಮಾಡುವ ವಿಚಾರವಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.


ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಭಾಂಗಣದಲ್ಲಿ ಭಾನುವಾರ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಆಯೋಜಿಸಿದ್ದ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.


ತಾಲೂಕಿನಲ್ಲಿ ಹೆಚ್ಚಿನ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಹೆಚ್ಚು ಅವಲಂಬಿಸಿದ್ದು, ಮುಖ್ಯ ಕಸುಬಾಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಹಾಗಾಗಿ ತಾಲೂಕಿನಲ್ಲಿ ಸುಮಾರು 65 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜತೆಗೆ ಕೋವಿಡ್ ಸಮಯದಲ್ಲಿ ಹೈನುಗಾರಿಕೆ ರೈತರನ್ನು ಕೈ ಹಿಡಿದಿದೆ. ಆದ್ದರಿಂದ ಹೈನುಗಾರಿಕೆಗೆ ಇನ್ನಷ್ಟು ಹೆಚ್ಚಿನ ಒತ್ತುನ್ನು ನೀಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. ಈ ದೆಸೆಯಲ್ಲಿ ಕಾಲುಬಾಯಿ ಜ್ವರ ತಗುಲದಂತೆ ಹಾಗೂ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ತಾಲೂಕನ್ನು ಕಾಲುಬಾಯಿ ಜ್ವರ ರೋಗಮುಕ್ತವಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಅಭಿಯಾನದ ಪ್ರಯೋಜನ ಪಡೆಯಿರಿ:


ತಾಲೂಕು ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ಮಾತನಾಡಿ, ಹಾಲಿನ ಉತ್ಪಾದನೆಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ 9ನೇ ಸ್ಥಾನದಲ್ಲಿದೆ. ಹಾಗಾಗಿ ಹೈನುಗಾರಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಕಾಲುಬಾಯಿ ಜ್ವರದ ಬ್ಯಾಕ್ಟೀರಿಯಾ ಹಾಗೂ ವೈರಾಣುವಿನಿಂದ ಹಾಲಿನ ಗುಣಮಟ್ಟ ಕಡಿಮೆಯಾಗುವ ಹಿನ್ನೆಲೆಯಲ್ಲಿ ವಿದೇಶಗಳಿಗೆ ಹಾಲನ್ನು ರಪ್ತು ಮಾಡುವಲ್ಲಿ ದೇಶ ಹಿಂದಿದೆ. ಕಾಲುಬಾಯಿ ಜ್ವರ ರೋಗವನ್ನು ತಡೆಗಟ್ಟುವ ಉದ್ದೇಶದಿಂದ 2019ರಲ್ಲಿ ರಾಷ್ಟ್ರೀಯ ಕಾಲುಬಾಯಿ ಜ್ವರ ರೋಗ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು, 3 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ತಾಲೂಕಿನಲ್ಲಿ 66,107 ಹಸುಗಳು ಹಾಗೂ 4,174 ಎಮ್ಮೆಗಳಿದ್ದು, ಲಸಿಕೆ ನೀಡಲು 26 ಲಸಿಕೆದಾರರು ಒಳಗೊಂಡಂತೆ 12 ತಂಡವನ್ನು ರಚಿಸಲಾಗಿದೆ. ಈ ತಂಡವು ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದು ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.


ಪಶು ವೈದ್ಯ, ಸಿಬ್ಬಂದಿ ಕೊರತೆ: ಇದೇ ವೇಳೆ ಚಾಮುಲ್ ನಿರ್ದೇಶಕ ಶಾಹುಲ್ ಆಹಮದ್ ಮಾತನಾಡಿ, ತಾಲೂಕಿನಲ್ಲಿ ಪಶು ವೈದ್ಯ, ಸಿಬ್ಬಂದಿ ಕೊರತೆ ಇದೆ. ಇದರಿಂದ ಸಕಾಲಕ್ಕೆ ಸೇವೆ ನೀಡಲು ಸಮಸ್ಯೆಯಾಗಿದೆ. ಆದ್ದರಿಂದ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಪಶುಸಂಗೊಪನೆ ಸಚಿವರ ಗಮನಕ್ಕೆ ತಂದು ವೈದ್ಯ, ಸಿಬ್ಬಂದಿಯನ್ನು ನಿಯೋಜಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಉಪಾಧ್ಯಕ್ಷ ಆನಂದ್‌ಕುಮಾರ್, ಸದಸ್ಯರಾದ ಮಹೇಶ್, ಮಹೇಶ್‌ನಾಯ್ಕ, ಚಾಮುಲ್ ಸಹಾಯಕ ವ್ಯವಸ್ಥಾಪಕ ಗಿರೀಶ್‌ಕುಮಾರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net