

ಬಾಗಲಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಡಿಯಲ್ಲಿರುವ ಎನ್.ಎಂ.ಎಚ್. ಸಿಬ್ಬಂದಿ ನೇಮಕಕ್ಕೆ ಅರ್ಜಿ ಆಹ್ವಾನಿಸದ ಬಳಿಕ ಅರ್ಜಿ ಸಲ್ಲಿಕೆ ಮಾಡಿ ಅರ್ಹತೆಯೊಂದಿಗೆ ಸೇವೆಗೆ ಹಾಜರಾಗಿದ್ದು, ಇದೀಗ ಕಾನೂನು ಬಾಹಿರ ಅಂತ ಸೇವೆಯಿಂದ ಬಿಡುಗಡೆಗೊಳಿಸಬೇಡಿ ಎಂದು ಆಗ್ರಹಿಸಿ ಎನ್.ಎಚ್.ಎಂ ಸಿಬ್ಬಂದಿಗಳು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಿಬ್ಬಂದಿಗಳು ಜಿ.ಪಂ ಸಿಇಒ ಶಶಿಧರ ಕುರೇರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
೨೦೦೨೨-೨೦೨೩ ಸಾಲಿನಲ್ಲಿ ಡಿಎಚ್‌ಒ ಡಾ.ಜಯಶ್ರೀ ಎಮ್ಮಿ ಎನ್.ಎಂ.ಎಚ್ ಸಿಬ್ಬಂದಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದರು. ಅದರಂತೆ ಅವರ ಆಡಳಿತ ಅವಽಯಲ್ಲಿ ಅರ್ಜಿ ಸಲ್ಲಿಸಿದ್ದೇವು. ನಂತರ ದಾಖಲಾತಿ ಪರಿಶೀಲನೆ, ಸಂದರ್ಶ ನಡೆದಿತ್ತು. ತದನಂತರ ಡಿಎಚ್‌ಒ ಆಗಿ ಬಂದ ಡಾ.ರಾಜುಕುಮಾರ ಯರಗಲ್ಲ ನೇಮಕಾತಿ ಆದೇಶ ಪತ್ರ ನೀಡಿದರು. ಯರಗಲ್ಲ ಅವರ ಅವಧಿಯಲ್ಲಿ ಏಳು ತಿಂಗಳು, ಡಾ.ಜಯಶ್ರೀ ಅವರ ಅವಽಯಲ್ಲಿ ಎರಡು ತಿಂಗಳು ಸೇವೆ ಸಲ್ಲಿಸಿದ್ದೇವೆ. ಕೆ.೨ ನೋಂದಣಿ, ಎಚ್‌ಆರ್‌ಎಂಎಸ್ ಐಡಿ ಮತ್ತು ಪಿಎಖಾತೆಗಳನ್ನು ಅವರೇ ಸಿದ್ದಗೊಳಿಸಿದ್ದಾರೆ. ಇಷ್ಟೆಲ್ಲ ಗೊತ್ತಿದ್ದರು ಸಿಇಒ ಅವರಿಗೆ ನಮ್ಮನ್ನು ಕೆಲಸದಿಂದ ವಜಾಗೊಳಿಸಲು ಮನವಿ ಸಲ್ಲಿಸಿದ್ದಾರೆ. ಇದೀಗ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ನಮ್ಮಲ್ಲಿನ ಕೆಲವು ಸಿಬ್ಬಂದಿಗಳು ಕೋವಿಡ್-೧೯ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಈ ಪ್ರಕ್ರಿಯೆಯಿಂದ ನಾವೆಲ್ಲ ಸಿಬ್ಬಂದಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಅವಲಂಬಿತ ಕುಟುಂಬಗಳು ಬೀದಿಪಾಲಾಗುವ ಸಾಧ್ಯತೆ ಇದೆ. ಯಾರಾದರು ಆತ್ಮಹತ್ಯೆ ಮಾಡಿಕೊಂಡರೇ ಸಂಪೂರ್ಣ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳೇ ಆಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.