ಕರೊನಾ ಭೀತಿ, ಬೆಳೆಗಾರನಿಗೆ ಫಜೀತಿ

31sirsi2b
Published on

ಶಿರಸಿ: ದರ ಕುಸಿತದ ಜತೆಗೆ ಮಾರುಕಟ್ಟೆಯೇ ಸ್ಥಗಿತಗೊಂಡ ಕಾರಣ ಬೆವರು ಸುರಿಸಿ ಬೆಳೆದಿದ್ದ ಬೆಳೆಗಳು ಬೆಳೆಗಾರರ ಕಣ್ಣೆದುರೇ ಹಾಳಾಗುತ್ತಿವೆ. ಹೀಗಾಗಿ ಈ ಮಹಾಮಾರಿಯೆದುರು ಬನವಾಸಿ ಭಾಗದ ಕೃಷಿಕರು ಮಂಡಿಯೂರುವ ಹಂತ ತಲುಪಿದ್ದಾರೆ.

ಬನವಾಸಿ ಭಾಗದ ರೈತರು ಶುಂಠಿ, ಬಾಳೆ, ಅನಾನಸ್ ಬೆಳೆದು ಜೀವನ ನಡೆಸುತ್ತಿದ್ದರು. ಆದರೆ, ಈ ವರ್ಷ ಕರೊನಾ ಭಯ, ಲಾಕ್​ಡೌನ್ ಹಿನ್ನೆಲೆಯಲ್ಲಿ ಶುಂಠಿ, ಅನಾನಸ್, ಬಾಳೆ ಬೆಳೆಗಳನ್ನು ಯಾರೂ ಕೇಳುವವರಿಲ್ಲದಂತಾಗಿದೆ. ಈ ಉತ್ಪನ್ನಗಳನ್ನು ಸಂಸ್ಕರಣೆ ಮಾಡುವ ಸಣ್ಣ ಉದ್ಯಮಗಳೂ ಮುಚ್ಚಿರುವುದರಿಂದ ಒಂದೆಡೆ ರೈತರಿಗೆ ಉತ್ಪನ್ನ ಮಾರಾಟವಾಗದೇ ಹಾನಿಯಾದರೆ, ಈ ಉತ್ಪನ್ನಗಳ ಸಂಸ್ಕರಣ ಘಟಕಗಳು ಮುಚ್ಚಿರುವುದರಿಂದ ಉದ್ಯಮಗಳಿಗೂ ನಷ್ಟವಾಗಿದೆ.

ಏಕಾಏಕಿ ಇಳಿದ ದರ: ಬೆಳೆಗಳು ಕೈಗೆ ಬಂದ ಹೊತ್ತಲ್ಲಿ ಮಾರಾಟ ಮಾಡಲಾಗದಂತೆ ಕರೊನಾ ಕಾಟದಿಂದ ಇಡೀ ಕೃಷಿ ವಲಯ ತಲ್ಲಣಿಸುತ್ತಿದೆ. ತಾಲೂಕಿನಲ್ಲಿ ಅಂದಾಜು 135 ಎಕರೆ ಶುಂಠಿ ಬೆಳೆಯುವ ಪ್ರದೇಶವಿದೆ. ಇದರಲ್ಲಿ ಹೆಚ್ಚಿನ ಭಾಗ ಇರುವುದು ಬನವಾಸಿ ಹೋಬಳಿಯಲ್ಲಿ. ರೈತರು ಇನ್ನುಳಿದ ಬೆಳೆಗಳ ಜತೆಗೆ, ಅರ್ಧ, ಒಂದು ಎಕರೆಯಲ್ಲಿ ಶುಂಠಿ ಬೆಳೆಯುತ್ತಾರೆ. ಕೆಲವರು ಲೀಸ್​ನ ಮೇಲೆ ಜಮೀನು ಪಡೆದು ಶುಂಠಿ ನಾಟಿ ಮಾಡಿದ್ದರು. ರೈತರ ಆರ್ಥಿಕ ಸಬಲತೆಗೆ ಬೆನ್ನೆಲುಬಾಗಿರುವ ಇಲ್ಲಿನ ಶುಂಠಿ, ಮುಂಬೈ, ಚೆನ್ನೈ, ಹೈದ್ರಾಬಾದ್ ಮಾರುಕಟ್ಟೆಗಳಿಗೆ ಹೋಗುತ್ತದೆ. ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಅರ್ಧದಷ್ಟು ಬೆಳೆ ಕೊಳೆರೋಗಕ್ಕೆ ತುತ್ತಾದದೆ, ಇನ್ನರ್ಧ ಬೆಳೆ ರೈತರಲ್ಲಿ ಭರವಸೆ ಮೂಡಿಸಿತ್ತು. ಕ್ವಿಂಟಲ್​ಗೆ 5,100 ರೂ.ಗಳಷ್ಟಿದ್ದ ದರ, ಒಂದು ವಾರದಲ್ಲಿ 2,500 ರಿಂದ 3000ಕ್ಕೆ ಇಳಿಕೆಯಾಗಿದೆ.

ಕೊಳೆಯುವ ಭೀತಿ: 150 ಹೆಕ್ಟೇರ್​ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ವಾಣಿಜ್ಯ ಬೆಳೆಯಾದ ಅನಾನಸ್ ಬೆಳೆ ಇದೀಗ ಬನವಾಸಿ ಭಾಗದಲ್ಲಿ ಕಟಾವಿಗೆ ಬಂದಿದೆ. ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡು ಹೊಲದಲ್ಲೇ ಕೊಳೆಯುವ ಸನ್ನಿವೇಶ ಎದುರಾಗಿದೆ. ಹೀಗಾಗಿ ಸಾವಿರಾರು ರೈತರು ತಮ್ಮ ಫಸಲನ್ನು ಮಾರಾಟ ಮಾಡಲಾಗದೇ ಕಂಗಾಲಾಗಿದ್ದಾರೆ. ಇನ್ನು ಮಾರುಕಟ್ಟೆಯಲ್ಲಿ ಅನಾನಸ್ ಪ್ರತಿ ಕೆ.ಜಿ.ಗೆ 20 ರಿಂದ 25 ರೂ. ಇತ್ತು. ಇದೀಗ ಕೆಜಿಗೆ 7 ರಿಂದ 8 ರೂ. ಗೆ ಇಳಿದಿದೆ. ಇವುಗಳನ್ನು ದೆಹಲಿ, ಜಮ್ಮು ಕಾಶ್ಮೀರ, ಪಂಜಾಬ್​ಗೆ ರಪ್ತು ಮಾಡಲಾಗುತ್ತಿತ್ತು. ಕರೊನಾ ಭೀತಿಯಿಂದಾಗಿ ಲಾರಿಗಳ ಸಂಚಾರ ಸ್ಥಗಿತವಾಗಿವೆ. ಈ ಹಿನ್ನೆಲೆಯಲ್ಲಿ ಅನಾನಸ್ ಬೆಳೆಯನ್ನು ಕಟಾವು ಮಾಡಲಾಗದೇ ಹೊಲದಲ್ಲೇ ಕೊಳೆಯುತ್ತಿವೆ. ಇನ್ನು ಬಾಳೆ ಬೆಳೆ ಕೂಡ ಸಂಪೂರ್ಣ ರೈತರ ಕೈತಪ್ಪಿದೆ. ಗೊನೆಗಳು ಮರಗಳಲ್ಲಿಯೇ ಹಣ್ಣಾಗಿ ಕೊಳೆಯಲಾರಂಭಿಸಿದೆ. ಒಂದೆಡೆ ದರ ಕುಸಿತ, ಇನ್ನೊಂದೆಡೆ ಸ್ಥಗಿತಗೊಂಡ ಮಾರುಕಟ್ಟೆಯ ಕಾರಣ ಕೃಷಿಕರು ಬೀದಿಗೆ ಬೀಳುವ ಹಂತ ತಲುಪಿದ್ದಾರೆ.

ನೂರಾರು ಹೆಕ್ಟೇರ್ ಭೂಮಿಯಲ್ಲಿ ಅನಾನಸ್ ಬೆಳೆ ಬೆಳೆಯಲಾಗಿದೆ. ಆದರೆ, ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ರೈತಾಪಿ ಸಮುದಾಯಕ್ಕೆ ದಿಕ್ಕು ತೊಚದಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.| ಬಸವರಾಜ ಗೌಡ ಅನಾನಸ್ ಬೆಳೆಗಾರ

ಪ್ರಸ್ತುತ ತರಕಾರಿಯನ್ನು ಮನೆಮನೆಗೆ ಮಾರಾಟ ಮಾಡಲು ತಾಲೂಕಾಡಳಿತ ಅನುಮತಿ ನೀಡಿದೆ. ಅದೇ ರೀತಿ ಬಾಳೆ ಗೊನೆ ಮಾರಲು ಬೆಳೆಗಾರರಿಗೆ ಅನುಮತಿ ನೀಡಿದರೆ ಆಗುವ ನಷ್ಟವನ್ನಾದರೂ ಕಡಿಮೆ ಮಾಡಿಕೊಳ್ಳುತ್ತಿದ್ದೇವು.| ಆನಂದ ಗೌಡ ಬಾಳೆ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net