

ವಿಜಯವಾಣಿ ಸುದ್ದಿಜಾಲ ದಾಂಡೇಲಿ/ಭಟ್ಕಳ/ಸಿದ್ದಾಪುರ: ರಾಜ್ಯಾದ್ಯಂತ ಒಂದು ವಾರ ಸಭೆ, ಸಮಾರಂಭಗಳಿಗೆ ನಿಷೇಧ ಹೇರಿದ ಸರ್ಕಾರದ ಆದೇಶ ಪ್ರವಾಸಿ ತಾಣಗಳ ಮೇಲೂ ಪರಿಣಾಮ ಬೀರಿದೆ.
ದಾಂಡೇಲಿ, ಹಳಿಯಾಳ ಹಾಗೂ ಜೊಯಿಡಾ ತಾಲೂಕಿನ ಎಲ್ಲ ರೆಸಾರ್ಟ್, ಹೋಂ ಸ್ಟೇ ಹಾಗೂ ಲಾಜ್ಗಳನ್ನು ಮಾ. 16ರಿಂದ ಒಂದು ವಾರದವರೆಗೆ ಬಂದ್ ಮಾಡುವಂತೆ ಆಯಾ ಮಾಲೀಕರಿಗೆ ಡಿವೈಎಸ್ಪಿ ಹಾಗೂ ತಹಸೀಲ್ದಾರರು ಸೂಚನೆ ನೀಡಿದ್ದಾರೆ.
ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಮುಂಗಡ ಬುಕ್ ಮಾಡಿದ ಪ್ರವಾಸಿಗರು ಹಾಗೂ ಈಗಾಗಲೇ ವಸತಿ ಇರುವವರನ್ನು ಭಾನುವಾರ ಸಂಜೆಯೇ ಖಾಲಿ ಮಾಡಿಸುವಂತೆ ಆದೇಶಿಸಿದ್ದು, ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.
ದಾಂಡೇಲಿ ನಗರ ಭಾಗದಲ್ಲಿ ಒಟ್ಟು 14 ಹೋಂ ಸ್ಟೇ, 9 ಲಾಜ್, ಒಂದು ರೆಸಾರ್ಟ್ ಹಾಗೂ ದಾಂಡೇಲಿ ಗ್ರಾಮೀಣ ಭಾಗದಲ್ಲಿ 41 ಹೋಂ ಸ್ಟೇ, 4 ರೆಸಾರ್ಟ್ ಗಳಿವೆ. ಹಳಿಯಾಳ ನಗರದಲ್ಲಿ ಒಂದು ರೆಸಾರ್ಟ್, ಜೊಯಿಡಾದಲ್ಲಿ 19 ಹೋಂ ಸ್ಟೇ, ರಾಮನಗರದಲ್ಲಿ 8 ರೆಸಾರ್ಟ್ ಹಾಗೂ 12 ಹೋಂ ಸ್ಟೇಗಳಿವೆ.
ಇನ್ನು ಭಟ್ಕಳ ತಾಲೂಕಿನ ಸ್ಕೂಬಾ ಡೈವ್ ಉದ್ಯಮವೂ ಸಂಪೂರ್ಣ ನೆಲಕಚ್ಚಿದೆ. ಸರ್ಕಾರದ ಆದೇಶ ಬಂದಿಲ್ಲವಾದರೂ ಪ್ರವಾಸಿಗರು ಭಯಭೀತರಾಗಿ ಇಲ್ಲಿಗೆ ಬರಲು ಹಿಂದೇಂಟು ಹಾಕುತ್ತಿದ್ದಾರೆ. ವಾರದ ಅಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕಬೇಕಿದ್ದ ದೋಣಿಗಳು ಜನರೇ ಇಲ್ಲದೆ ಖಾಲಿ ನಿಂತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇದರ ನಿರ್ವಹಣೆ ಮಾಡುವುದು ಕಷ್ಟ ಎನ್ನುತ್ತಿದ್ದಾರೆ ನೇತ್ರಾಣಿ ವೇಂಚರ್ಸ್ನ ಗಣೇಶ ಹರಿಕಾಂತ.
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ನೀರಿನ ಹರಿವು ಈ ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚಿರುವುದರಿಂದ ಕಳೆದ ವಾರದವರೆಗೂ ಪ್ರವಾಸಿಗರು ಆಗಮಿಸಿ ಜೋಗದ ವೈಭವ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ವಾರದಿಂದ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಾಗಿದೆ. ಜೋಗ ಜಲಪಾತದ ಸಮೀಪ ಇರುವ ಮಾವಿನಗುಂಡಿಯಲ್ಲಿಯೂ ಪ್ರವಾಸಿಗರಿಲ್ಲದೆ, ಸ್ಥಳೀಯ ಹೋಟೆಲ್, ಅಂಗಡಿಕಾರರು ವ್ಯಾಪಾರ ಇಲ್ಲದೇ ಪರಿತಪಿಸುತ್ತಿದ್ದಾರೆ.
ಖಾಲಿ ಮಾಡಿಸುವ ಕೆಲಸ: ಜಿಲ್ಲಾಧಿಕಾರಿಗಳ ಆದೇಶದಂತೆ ಭಾನುವಾರ ಸಂಜೆಯಿಂದಲೇ ಬಹುತೇಕ ಕಡೆ ಪ್ರವಾಸಿಗರಿದ್ದ ರೂಮ್ಳನ್ನು ಖಾಲಿ ಮಾಡಿಸುವ ಕಾರ್ಯ ಆರಂಭವಾಗಿದೆ. ಒಳ ಗ್ರಾಮೀಣ ಭಾಗದ ವಸತಿ ಗೃಹಗಳಿಗೆ ಮಾಹಿತಿ ಹೋಗಬೇಕಾಗಿದೆ. ಭಾನುವಾರ ಸಂಜೆಯಿಂದ ಯಾವ ಪ್ರವಾಸಿಗರಿಗೂ ವಸತಿ ನೀಡಿಲ್ಲ. ಒಂದು ವಾರದವರೆಗೆ ಯಾವುದೇ ಬುಕಿಂಗ್ ಮಾಡಿಕೊಂಡಿಲ್ಲ ಎನ್ನುತ್ತಾರೆ ಜಂಗಲ್ ಲಾಜ್ ವ್ಯವಸ್ಥಾಪಕ ಪಂಪಾಪತಿ.
ಕರೊನಾ ಆತಂಕದಿಂದಾಗಿ ಜೋಗಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಳೆದ ಮೂರ್ನಾಲ್ಕು ದಿನದಿಂದ ಕಡಿಮೆ ಆಗಿದೆ. ಜೋಗದಲ್ಲಿ ನೀರಿಲ್ಲದಿದ್ದರೂ ಪ್ರತಿ ವರ್ಷ ಈ ಸಮಯದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ವರ್ಷ ನೀರಿದ್ದರೂ ಪ್ರವಾಸಿಗರಿಲ್ಲ. ಹೀಗೆಯೇ ಮುಂದುವರಿದರೆ ನಾವು ಅಂಗಡಿ ಬಾಗಿಲು ಹಾಕುವುದು ಅನಿವಾರ್ಯ. | ಚಂದ್ರು ನಾಯ್ಕ ವ್ಯಾಪಾರಿ ಜೋಗ ಜಲಪಾತ ಸಿದ್ದಾಪುರ
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೆಶ್ವರದಲ್ಲಿ ಈಗಾಗಲೇ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ. ಮಾ. 16ರಿಂದ ಭಟ್ಕಳದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಇನ್ನೆರಡು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಪ್ರವಾಸಿಗರ ದೇಹದ ಉಷ್ಣಾಂಶ ತಿಳಿಯಲಿದ್ದು ಇತರ ಮಾಹಿತಿ ಸಂಗ್ರಹಿಸಲು ನೆರವಾಗುತ್ತದೆ. ವಿದೇಶಿ ಪ್ರಜೆಗಳು, ಸೋಂಕಿತ ಪ್ರದೇಶದಿಂದ ಬಂದ ಪ್ರವಾಸಿಗರ ಮೇಲೂ ನಿಗಾ ಇಡಲಾಗುವುದು. | ಡಾ. ಅಶೋಕ ಕುಮಾರ ಜಿಲ್ಲಾ ಆರೋಗ್ಯಾಧಿಕಾರಿ
ಸಿದ್ದಾಪುರ ತಾಲೂಕಿನಲ್ಲಿ ಕರೊನಾ ವೈರಸ್ ಸೋಂಕಿತರು ಯಾರೂ ಇಲ್ಲ. ಆದರೆ, ವಿದೇಶದಿಂದ ಒಂದಿಬ್ಬರು ಬಂದಿದ್ದಾರೆ. ಅವರ ಮೇಲೆ ನಿಗಾ ಇರಿಸಲಾಗಿದೆ. ಆರೋಗ್ಯ ಇಲಾಖೆ ಈ ಕುರಿತು ಹೆಚ್ಚು ಜಾಗೃತಿ ವಹಿಸಿದೆ. | ಡಾ.ಲಕ್ಷ್ಮೀಕಾಂತ ನಾಯ್ಕ ತಾಲೂಕು ವೈದ್ಯಾಧಿಕಾರಿ ಸಿದ್ದಾಪುರ